ಕೊಡಗು : ಆನೆ ದಾಳಿಗೆ ಸಿಲುಕಿ ಪತ್ನಿ ದುರಂತವಾಗಿ ಸಾವನ್ನಪ್ಪಿದ ಭೀಕರ ದುಃಖದ ಸಂದರ್ಭದಲ್ಲೂ, ಆಕೆಯ ಪತಿ ಪತ್ನಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಮಾನವೀಯ ಘಟನೆ ನಡೆದಿದೆ.
ತಮ್ಮ ಬದುಕಿನ ಅತಿ ದೊಡ್ಡ ನಷ್ಟದ ನಡುವೆಯೂ ಮತ್ತೊಬ್ಬರ ಬಾಳಿಗೆ ಬೆಳಕಾಗಲು ಮುಂದಾದ ಪತಿಯ ಈ ಹೃದಯಸ್ಪರ್ಶಿ ಮತ್ತು ಸಮಾಜಮುಖಿ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಹೌದು. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಪ್ರಸಿದ್ಧ ದುಬಾರೆ ಆನೆ ಬಿಡಾರದಲ್ಲಿ ಕಾವೇರಿ ನದಿ ದಂಡೆಯ ಬಳಿ ಆನೆಗಳಿಗೆ ಸ್ನಾನ ಮಾಡಿಸುವಾಗ ಎರಡು ಸಾಕಾನೆಗಳ ನಡುವೆ ಹಠಾತ್ ಜಗಳ ಏರ್ಪಟ್ಟಿದೆ. ದಸರಾ ಆನೆಗಳಾದ ‘ಕಂಜನ್’ ಮತ್ತು ‘ಮಾರ್ತಾಂಡ’ ಪರಸ್ಪರ ಕಾದಾಡಿಕೊಂಡಿದ್ದು, ಈ ವೇಳೆ ಮಾರ್ತಾಂಡ ಆನೆಯು ಆಯತಪ್ಪಿ ಬಿದ್ದಿದೆ. ಪರಿಣಾಮವಾಗಿ, ಚೆನ್ನೈನ ಪಲ್ಲವರಂ ಮೂಲದ ಪ್ರವಾಸಿ ಮಹಿಳೆ ಜಿನ್ಸು (33) ಎಂಬುವವರು ಆನೆಯ ಅಡಿಯಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮೃತರ ಪತಿ ಮತ್ತು 5 ವರ್ಷದ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದುರಂತದ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ದುಬಾರೆ ಆನೆ ಬಿಡಾರವನ್ನು ಸದ್ಯಕ್ಕೆ ಬಂದ್ ಮಾಡಲಾಗಿದ್ದು, ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇನ್ನು ದುಃಖದ ನಡುವೆಯೂ ಕುಟುಂಬಸ್ಥರು ಮೃತ ಮಹಿಳೆಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

