ಬಳ್ಳಾರಿ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು 7 ತಿಂಗಳ ಹೆಣ್ಣು ಮಗುವನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ಬಳ್ಳಾರಿ ನಗರದ ಅಂದ್ರಾಳ ಪ್ರದೇಶದ ಮನೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ರಾಜೇಶ್ವರಿ ಮತ್ತು ಪುತ್ರಿ ಅಶ್ವಿನಿ ಮೃತಪಟ್ಟವರು. ಪತಿ ಹೊನ್ನೂರಸ್ವಾಮಿ ಸುತ್ತಿಗೆಯಿಂದ ಹೊಡೆದು ಪತ್ನಿ ಹಾಗೂ ಪುತ್ರಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
ದಂಪತಿ ನಡುವೆ ಕೆಲ ದಿನಗಳಿಂದ ಜಗಳವಾಗಿದ್ದು, ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿ ಆರೋಪಿ ಕೊಲೆಗೈದ ಶಂಕೆ ವ್ಯಕ್ತವಾಗಿದೆ. ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

