ಮಂಗಳೂರು: ಮಾಜಿ ಸಂಸದರೊಂದಿಗೆ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದ ಪತಿಗೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯ ಮೂರನೇ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ್ ಈ.ಎಸ್. ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮುಂಬೈನ ಥಾಣೆಯ ಮೀರಾ ರೋಡ್ ಈಸ್ಟ್ ನಿವಾಸಿ ಸತೀಶ್ ಶೆಟ್ಟಿ ಶಿಕ್ಷೆಗೊಳಗಾದವರು. ಮಾಜಿ ಸಂಸದರೊಂದಿಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿರುವುದಾಗಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸಿದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಆರೋಪಿ ಮಕ್ಕಳಾದ ನಂತರ ಪತ್ನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಕಾರಣ ಮಹಿಳೆ ತಾಯಿಯ ಮನೆಯಲ್ಲಿ ವಾಸವಾಗಿದ್ದರು. 2014ರ ಮೇ 13 ರಂದು ಆರೋಪಿ ಖಾಸಗಿ ವಾಹಿನಿ ಮತ್ತು ಪತ್ರಿಕೆಗಳಲ್ಲಿ ಮಾಜಿ ಸಂಸದರ ಜೊತೆಗೆ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಸುದ್ದಿ ಪ್ರಕಟಿಸಿದ್ದ. ಈ ಕುರಿತಾಗಿ ಸಂತ್ರಸ್ತೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿ ಸತೀಶ್ ಶೆಟ್ಟಿಗೆ ಒಂದು ವರ್ಷ ಸಾದಾ ಸಜೆ, ಐದು ಸಾವಿರ ರೂಪಾಯಿ ದಂಡ, ದಂಡದ ಮೊತ್ತ ಪಾವತಿಸಲು ವಿಫಲವಾದಲ್ಲಿ ಒಂದು ತಿಂಗಳು ಹೆಚ್ಚುವರಿ ಸಜೆ ಅನುಭವಿಸಲು ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನೇತ್ರಾವತಿ ಮತ್ತು ಗೀತಾ ರೈ ಅವರು ವಾದ ಮಂಡಿಸಿದ್ದರು.

