ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲೆಫ್ಟಿನೆಂಟ್ ಜನರಲ್ ಅವರ ಪತ್ನಿಯಾದ 82 ವರ್ಷದ ವೃದ್ಧ ಮಹಿಳೆಗೆ ಏರ್ ಇಂಡಿಯಾ ವೀಲ್ ಚೇರ್ ನಿರಾಕರಿಸಿದ್ದರಿಂದ ಅವರು ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದು, ಮೆದುಳಿಗೆ ರಕ್ತಸ್ರಾವವಾಗಿ ಐಸಿಯುಗೆ ದಾಖಲಾಗಿದ್ದಾರೆ. ವಿಮಾನಯಾನ ಸಂಸ್ಥೆಯು ಈ ಘಟನೆಯ ಬಗ್ಗೆ “ಗಮನಿಸಿ ಕಳವಳ ವ್ಯಕ್ತಪಡಿಸಿದೆ” ಮತ್ತು ಮಹಿಳೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ. ಏರ್ಲೈನ್ “ಕಾಳಜಿಯ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ” ಎಂದು ಒತ್ತಿ ಹೇಳಿದೆ.
ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 4 ರಂದು ಈ ಘಟನೆ ನಡೆದಿದ್ದು, ಲೆಫ್ಟಿನೆಂಟ್ ಜನರಲ್ ಅವರ ಪತ್ನಿ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಕುಟುಂಬ ಸದಸ್ಯರೊಬ್ಬರು ವಿಮಾನ ನಿಲ್ದಾಣದ ಹೊರಗಿನ ಸಹಾಯ ಕೇಂದ್ರವನ್ನು ಸಂಪರ್ಕಿಸಿ ಸುಮಾರು ಒಂದು ಗಂಟೆ ವೀಲ್ ಚೇರ್ ಗಾಗಿ ಕಾದರು. ಆದರೆ, ಹಿರಿಯ ನಾಗರಿಕ ಮಹಿಳೆ ಮತ್ತು ಆಕೆಯ ಮೊಮ್ಮಗ ಗಣನೀಯ ಸಮಯ ಕಾಯ್ದ ನಂತರ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಕಡೆಗೆ ನಡೆದುಕೊಂಡು ಹೋದರು. ದುರದೃಷ್ಟವಶಾತ್, ಮಹಿಳೆ ಏರ್ಲೈನ್ ಕೌಂಟರ್ ಬಳಿ ಬಿದ್ದು ತಲೆಗೆ ಗಾಯಗಳಾಗಿ, ಮೂಗಿನಿಂದ ರಕ್ತಸ್ರಾವವಾಗಿ, ಮೇಲಿನ ತುಟಿ ಮತ್ತು ನಾಲಿಗೆಗೆ ಕತ್ತರಿಸಿದಂತಾಯಿತು.
ಮಹಿಳೆಯ ಮೊಮ್ಮಗಳು ಪಾರುಲ್ ಕನ್ವರ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ತನ್ನ ಕಷ್ಟವನ್ನು ಹಂಚಿಕೊಂಡಿದ್ದು, ತನ್ನ ಅಜ್ಜಿಗೆ ಪ್ರಥಮ ಚಿಕಿತ್ಸೆ ನೀಡಲಾಗಿಲ್ಲ ಎಂದು ಆರೋಪಿಸಿದ್ದಾರೆ. ತನ್ನ ಅಜ್ಜಿ ಎರಡು ದಿನಗಳಿಂದ ಐಸಿಯುನಲ್ಲಿದ್ದಾರೆ ಮತ್ತು ಆಕೆಯ ದೇಹದ ಎಡಭಾಗವು ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.