ಫೆಬ್ರವರಿ ತಿಂಗಳಿನಲ್ಲಿ ಕೇವಲ 28 ದಿನಗಳು ಮಾತ್ರ ಏಕೆ ಇರುತ್ತವೆ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಮೂಡುತ್ತದೆ. ಫೆಬ್ರವರಿ ಇತರ ತಿಂಗಳುಗಳಿಗಿಂತ ಕಡಿಮೆ ದಿನಗಳನ್ನು ಹೊಂದಿರಲು ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಆದರೆ, ಇತಿಹಾಸ ಮತ್ತು ಹಳೆಯ ರೋಮನ್ ನಂಬಿಕೆಗಳೇ ಇದಕ್ಕೆ ಮುಖ್ಯ ಕಾರಣವೆಂದು ತಿಳಿದುಬರುತ್ತದೆ.
ನಾವು ಇಂದು ಬಳಸುತ್ತಿರುವ ಗ್ರೆಗೋರಿಯನ್ ಕ್ಯಾಲೆಂಡರ್ ಸಾವಿರಾರು ವರ್ಷಗಳ ಹಿಂದಿನ ರೋಮನ್ ಕಾಲದ ಮೂಲವನ್ನು ಹೊಂದಿದೆ. ಬಹಳ ಹಿಂದಿನ ಕಾಲದಲ್ಲಿ ರೋಮನ್ನರು ಚಂದ್ರನ ಆಧಾರದ ಮೇಲೆ ಕ್ಯಾಲೆಂಡರ್ ತಯಾರಿಸುತ್ತಿದ್ದರು. ಆ ಸಮಯದಲ್ಲಿ ತಿಂಗಳುಗಳು ಚಂದ್ರನ ಚಕ್ರದ ಪ್ರಕಾರ ನಡೆಯುತ್ತಿದ್ದವು. ಆದ್ದರಿಂದ ಅವುಗಳಲ್ಲಿ 29 ಅಥವಾ 31 ರಂತಹ ಬೆಸ ಸಂಖ್ಯೆಯ ದಿನಗಳನ್ನು ಸೇರಿಸಲಾಗುತ್ತಿತ್ತು. ಆರಂಭದಲ್ಲಿ ರೋಮನ್ ವರ್ಷದಲ್ಲಿ ಮಾರ್ಚ್‌ನಿಂದ ಡಿಸೆಂಬರ್‌ವರೆಗೆ ಕೇವಲ 10 ತಿಂಗಳುಗಳು ಮಾತ್ರ ಇದ್ದವು. ಚಳಿಗಾಲದ ದಿನಗಳನ್ನು ಕ್ಯಾಲೆಂಡರ್‌ನಲ್ಲಿ ಸರಿಯಾಗಿ ಲೆಕ್ಕ ಹಾಕುತ್ತಿರಲಿಲ್ಲ, ಏಕೆಂದರೆ ಆ ಸಮಯದಲ್ಲಿ ಕೃಷಿ ಅಥವಾ ಇತರ ಯಾವುದೇ ವಿಶೇಷ ಕೆಲಸಗಳು ಇರುತ್ತಿರಲಿಲ್ಲ.
ಜನವರಿ ಮತ್ತು ಫೆಬ್ರವರಿತಿಂಗಳುಗಳ ಸೇರ್ಪಡೆ
ನಂತರ, ರೋಮನ್ ರಾಜ ನುಮಾ ಪಾಂಪಿಲಿಯಸ್ ಕ್ಯಾಲೆಂಡರ್ ಅನ್ನು ವ್ಯವಸ್ಥಿತವಾಗಿ ರೂಪಿಸಲು ನಿರ್ಧರಿಸಿದನು. ಅವನು ಜನವರಿ ಮತ್ತು ಫೆಬ್ರವರಿ ಎಂಬ ಎರಡು ಹೊಸ ತಿಂಗಳುಗಳನ್ನು ಸೇರಿಸಿದನು. ಇದರೊಂದಿಗೆ ವರ್ಷವು 12 ತಿಂಗಳುಗಳಾಯಿತು. ಆದರೆ ಇಲ್ಲೊಂದು ಸಮಸ್ಯೆ ಎದುರಾಯಿತು. ರೋಮನ್ನರು ಬೆಸ ಸಂಖ್ಯೆಗಳನ್ನು ಶುಭವೆಂದು ಮತ್ತು ಸಮ ಸಂಖ್ಯೆಗಳನ್ನು ಅಶುಭವೆಂದು ನಂಬುತ್ತಿದ್ದರು.
ತಿಂಗಳುಗಳನ್ನು ಸಮತೋಲನಗೊಳಿಸಲು ಒಂದು ತಿಂಗಳ ದಿನಗಳನ್ನು ಕಡಿಮೆ ಮಾಡಬೇಕಾಗಿ ಬಂತು. ಅದಕ್ಕಾಗಿ ಅವರು ಫೆಬ್ರವರಿ ತಿಂಗಳನ್ನು ಆರಿಸಿಕೊಂಡರು. ಫೆಬ್ರವರಿಯು ಆಗಲೇ ಮೃತಪಟ್ಟವರಿಗೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳ ತಿಂಗಳೆಂದು ಪರಿಗಣಿಸಲ್ಪಟ್ಟಿತ್ತು. ಹಾಗಾಗಿ, ಆ ತಿಂಗಳನ್ನು ಚಿಕ್ಕದಾಗಿ ಮತ್ತು ಸ್ವಲ್ಪ ವಿಭಿನ್ನವಾಗಿ ಇಡುವುದು ರೋಮನ್ನರಿಗೆ ಸೂಕ್ತವೆಂದು ಅನ್ನಿಸಿತು. ಈ ಕಾರಣದಿಂದ ಫೆಬ್ರವರಿಯನ್ನು ಕೇವಲ 28 ದಿನಗಳಿಗೆ ಸೀಮಿತಗೊಳಿಸಲಾಯಿತು. ಈ ನಿರ್ಧಾರವು ಯಾವುದೇ ವಿಜ್ಞಾನದ ಆಧಾರದ ಮೇಲೆ ಇರಲಿಲ್ಲ, ಬದಲಿಗೆ ಅಂದಿನ ನಂಬಿಕೆಗಳ ಮೇಲೆ ಆಧಾರಿತವಾಗಿತ್ತು.
ಕ್ಯಾಲೆಂಡರ್ ಸುಧಾರಣೆ ಮತ್ತು ಲೀಪ್ಇಯರ್
ತದನಂತರ ಜೂಲಿಯಸ್ ಸೀಸರ್ ಕ್ಯಾಲೆಂಡರ್‌ನಲ್ಲಿ ದೊಡ್ಡ ಬದಲಾವಣೆ ತಂದು, ಸೂರ್ಯನ ಚಲನೆಯ ಆಧಾರದ ಮೇಲೆ ರೂಪಿಸಲಾದ ‘ಜೂಲಿಯನ್ ಕ್ಯಾಲೆಂಡರ್’ ಅನ್ನು ಪರಿಚಯಿಸಿದನು. ಅನೇಕ ಬದಲಾವಣೆಗಳಾದರೂ ಫೆಬ್ರವರಿ ತಿಂಗಳ ಅವಧಿ ಮಾತ್ರ ಹಾಗೆಯೇ ಉಳಿಯಿತು. ಪ್ರತಿ ನಾಲ್ಕು ವರ್ಷಕ್ಕೊಮ್ಮೆ, ‘ಲೀಪ್ ಇಯರ್’ ಸೃಷ್ಟಿಸಲು ಒಂದು ಹೆಚ್ಚುವರಿ ದಿನವನ್ನು ಸೇರಿಸಲಾಯಿತು, ಇದರಿಂದಾಗಿ ಫೆಬ್ರವರಿ ಕೆಲವೊಮ್ಮೆ 29 ದಿನಗಳನ್ನು ಹೊಂದಿರುತ್ತದೆ.
ಕೊನೆಯದಾಗಿ, 1582 ರಲ್ಲಿ ಪೋಪ್ ಗ್ರೆಗೊರಿ XIII ಈ ಕ್ಯಾಲೆಂಡರ್ ಅನ್ನು ಮತ್ತಷ್ಟು ಸುಧಾರಿಸಿ ‘ಗ್ರೆಗೋರಿಯನ್ ಕ್ಯಾಲೆಂಡರ್’ ಸೃಷ್ಟಿಸಿದರು. ಇಂದು ಪ್ರಪಂಚದಾದ್ಯಂತ ಹೆಚ್ಚಿನ ದೇಶಗಳು ಇದನ್ನೇ ಬಳಸುತ್ತಿವೆ. ಆದರೂ, ಫೆಬ್ರವರಿ ಅತ್ಯಂತ ಕಡಿಮೆ ದಿನಗಳ ತಿಂಗಳಾಗಿಯೇ ಉಳಿದಿದೆ. ಅಂದರೆ ಫೆಬ್ರವರಿಯಲ್ಲಿ 28 ದಿನಗಳಿರುವುದು ಇತಿಹಾಸ, ಸಂಪ್ರದಾಯ ಮತ್ತು ಹಳೆಯ ರೋಮನ್ ನಿರ್ಧಾರಗಳ ಫಲಿತಾಂಶವೇ ಹೊರತು ವೈಜ್ಞಾನಿಕ ಕಾರಣವಲ್ಲ.

