ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮರುಮತ ಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಗುರುವಾರ ಮಹತ್ವದ ವಿಚಾರಣೆ ನಡೆಯಲಿದೆ.
ಮೇ 2 ರಂದು ನಡೆದ ಮರು ಮತ ಎಣಿಕೆಯಲ್ಲಿ ಅಂಚೆ ಮತ ಪತ್ರ ತಿರುಚಲಾಗಿದೆ ಎಂದು ಆರೋಪಿಸಿ ಜೊತೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಮೇ 11 ರಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶೃಂಗೇರಿ ಕ್ಷೇತ್ರದ ಮರುಮತ ಎಣಿಕೆ ಮತ್ತು ಫಲಿತಾಂಶಕ್ಕೆ ಮಧ್ಯಂತರ ತಡೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮತ್ತು ಮರು ಎಣಿಕೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಇದರಿಂದಾಗಿ ಅವರ ಶಾಸಕತ್ವ ಊರ್ಜಿತಗೊಂಡಿತು. ಮೇ 21ರಂದು ಗುರುವಾರ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದ್ದು ಅಂತ್ಯ ನ್ಯಾಯಮೂರ್ತಿಗಳಾದ ಸಂಜಯ ಕುಮಾರ್ ಮತ್ತು ವಿನೋದ್ ಚಂದ್ರ ಅವರ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಅಂಚೆ ಮರುಮತ ಎಣಿಕೆ ಪ್ರಕರಣದ ವಿಚಾರಣೆ ನಡೆಯಲಿದೆ.

