ನವದೆಹಲಿ: ಅಪೂರ್ಣವಾದ, ಗುಂಡಿಗಳು ಬಿದ್ದ ಅಥವಾ ಸಂಚರಿಸಲು ಸಾಧ್ಯವಾಗದಷ್ಟು ದಟ್ಟಣೆ ಇರುವ ಹೆದ್ದಾರಿಗಳಲ್ಲಿ ಟೋಲ್ ಪಾವತಿಸುವಂತೆ ಪ್ರಯಾಣಿಕರನ್ನು ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಟ್ರಾಫಿಕ್ ಜಾಮ್ ಆಗಿದ್ದ ಹೆದ್ದಾರಿಯೊಂದರಲ್ಲಿ ಸುಂಕ ವಸೂಲಾತಿ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಎಡಪಳ್ಳಿ- ಮನ್ನತಿ ನಡುವಿನ 65 ಕಿ.ಮೀ ಹೆದ್ದಾರಿಯಲ್ಲಿ ಕಳೆದ ವಾರ 12 ಗಂಟೆ ಕಾಲ ವಾಹನ ದಟ್ಟಣೆ ಉಂಟಾಗಿತ್ತು. ಈ ವೇಳೆ ನಿಂತಲ್ಲೇ ನಿಂತಿದ್ದ ಪ್ರಯಾಣಿಕರು 150 ರೂಪಾಯಿ ಸುಂಕ ಕಟ್ಟಬೇಕಿಲ್ಲ ಎಂದು ಆಗಸ್ಟ್ 6ರಂದು ಕೇರಳ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಕೆ. ವಿನೋದ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ಪೀಠ ಸುಂಕ ವಸೂಲಾತಿಯಾಗದಿದ್ದರೆ ಆಗುವ ನಷ್ಟಕ್ಕಿಂತ ಸಾರ್ವಜನಿಕರ ಹಿತಕ್ಕೆ ಪ್ರಾಮುಖ್ಯತೆ ನೀಡಿ ಆದೇಶಿಸಿದೆ. ನಾಗರಿಕರು ಈಗಾಗಲೇ ತೆರಿಗೆ ಪಾವತಿಸಿರುವ ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸಲಿ ಎಂದು ಹೇಳಿದೆ.
‘ರ್ಬಲ ಸ್ಥಿತಿಯಲ್ಲಿರುವ ಹೆದ್ದಾರಿಗಳಲ್ಲಿ ಟೋಲ್ ವಿಧಿಸುವಂತಿಲ್ಲ ಎಂಬ ಕೇರಳ ಹೈಕೋರ್ಟ್‌ನ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹಾನಿಗೊಳಗಾದ ರಸ್ತೆಗಳು ಜನರಿಗೆ ತೊಂದರೆ ಉಂಟುಮಾಡುತ್ತವೆ, ಇಂಧನ ವ್ಯರ್ಥ ಮಾಡುತ್ತವೆ ಮತ್ತು ಪರಿಸರಕ್ಕೆ ಹಾನಿ ಮಾಡುತ್ತವೆ ಎಂದು ಅದು ಹೇಳಿದೆ.
ರಸ್ತೆಯ ಕಳಪೆ ಸ್ಥಿತಿಯನ್ನು ಉಲ್ಲೇಖಿಸಿ, NH-544 ರ ತ್ರಿಶೂರ್‌ನ ಪಲಿಯೆಕ್ಕರದಲ್ಲಿ ನಾಲ್ಕು ವಾರಗಳ ಕಾಲ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿದ ಕೇರಳ ಹೈಕೋರ್ಟ್‌ನ ಆಗಸ್ಟ್ 6 ರ ಆದೇಶವನ್ನು ಎತ್ತಿಹಿಡಿದಿದೆ.