ಗ್ರಾಮ ಪಂಚಾಯಿತಿ ಚುನಾವಣೆಗಳು ಯಾವಾಗ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ವಿಧಾನಸಭೆ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದಲ್ಲಿಯೂ ಈ ಕುರಿತು ಪ್ರಶ್ನೆ ಕೇಳಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ/ ತಾಲೂಕು ಪಂಚಾಯಿತಿ ಅವಧಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಇನ್ನೂ ಚುನಾವಣೆಯನ್ನು ನಡೆಸದಿರುವುದರಿಂದ ಆಡಳಿತ ವ್ಯವಸ್ಥೆಯು ಕುಂಠಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಪ್ರಶ್ನಿಸಲಾಗಿತ್ತು.
ಶೀಘ್ರದಲ್ಲೇ ಚುನಾವಣೆ ನಡೆಸಲು ಸರ್ಕಾರ ಕೈಗೊಂಡ ಕ್ರಮಗಳೇನು?. ಸದರಿ ಚುನಾವಣೆಗಳನ್ನು/ ಪ್ರಕ್ರಿಯೆಗಳನ್ನು ಯಾವಾಗ ಪ್ರಾರಂಭಿಸಲಾಗುತ್ತದೆ? (ವಿವರ ನೀಡುವುದು) ಎಂದು ಪ್ರಶ್ನಿಸಲಾಗಿತ್ತು.
ಸಚಿವರ ಉತ್ತರ: ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 2020ರಲ್ಲಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿರುತ್ತದೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಜನವರಿ-ಫೆಬ್ರವರಿ 2021ರಲ್ಲಿ ಚುನಾವಣೆ ನಡೆಸಿ ಆಯ್ಕೆ ಮಾಡಲಾಗಿದ್ದು, ಈ ಅವಧಿಯು ಜನವರಿ-ಫೆಬ್ರವರಿ-ಮಾರ್ಚ್ 2026ರವರೆಗೆ ಇರುತ್ತದೆ.
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಅವಧಿಯು ಜೂನ್ 2021ಕ್ಕೆ ಮುಕ್ತಾಯಗೊಂಡಿರುತ್ತದೆ. ಅವಧಿಯು ಮುಗಿದ ನಂತರ ಚುನಾವಣೆಯನ್ನು ನಡೆಸುವ ಸಿದ್ಧತೆಯಲ್ಲಿದ್ದಾಗ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ.
ತದನಂತರ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ಕ್ಕೆ ತಿದ್ದುಪಡಿ ತಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿತ್ತು. ಆಯೋಗವು ನೀಡಿದ ಶಿಫಾರಸ್ಸಿನಂತೆ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಯ ಸೀಮಾ ಗಡಿಯನ್ನು ಗುರುತಿಸಿ ಅಧಿಸೂಚಿಸಲಾಗಿತ್ತು.
ಕೆಲವು ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿ/ ಪುರಸಭೆ/ ನಗರ ಸಭೆಗಳಾಗಿ ಪರಿವರ್ತನೆಯಾಗಿರುವುದರಿಂದ, ಸಂಬಂಧಿಸಿದ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಿಂದ ಕೈ ಬಿಡಲು ಅಧಿಸೂಚನೆ ಹೊರಡಿಸಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳ ಸೀಮಾ/ ಗಡಿಗಳನ್ನು ನಿಗದಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 2020ರಲ್ಲಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿರುತ್ತದೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಜನವರಿ- ಫೆಬ್ರವರಿ 2021ರಲ್ಲಿ ಚುನಾವಣೆ ನಡೆಸಿ ಆಯ್ಕೆ ಮಾಡಲಾಗಿದ್ದು, ಈ ಅವಧಿಯು ಜನವರಿ, ಫೆಬ್ರವರಿ- ಮಾರ್ಚ್ 2026ರವರೆಗೆ ಇರುತ್ತದೆ.
ಮುಂದುವರೆದು, ಸರ್ಕಾರದ ಪತ್ರ ಸಂಖ್ಯೆ: RDPR 486 GPA 2025, ದಿನಾಂಕ:28-01-2026 ರಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರಡಿಯಲ್ಲಿ ಗ್ರಾಮ ಪಂಚಾಯತಿಗಳಿಗೆ 2026-31ನೇ ಸಾಲಿನ ಗ್ರಾಮ ಪಂಚಾಯತಿಯ ಸಾರ್ವತ್ರಿಕ ಚುನಾವಣೆ ನಡೆಸಲು ಬೇಕಾಗಿರುವ ಎಲ್ಲಾ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

