ನವದೆಹಲಿ-ಭಾರತದಲ್ಲಿ ವಾಟ್ಸಾಪ್ (WhatsApp) ಬಳಕೆದಾರರಿಗೆ ಭಾರೀ ಆಘಾತವೊಂದು ಎದುರಾಗಿದೆ. ದೇಶದ ಹಲವೆಡೆ ಏಕಾಏಕಿ ನೂರಾರು ಬಳಕೆದಾರರ ವಾಟ್ಸಾಪ್ ಖಾತೆಗಳನ್ನು 24 ಗಂಟೆಗಳ ಅವಧಿಗೆ ಪರಿಶೀಲನೆಗೆ (Review) ಒಳಪಡಿಸಲಾಗಿದ್ದು, ಈ ಅವಧಿಯಲ್ಲಿ ಆ್ಯಪ್‌ನ ಯಾವುದೇ ವೈಶಿಷ್ಟ್ಯಗಳನ್ನು ಬಳಸದಂತೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಯಾವುದೇ ಮುನ್ಸೂಚನೆ ಅಥವಾ ಸ್ಪಷ್ಟ ಕಾರಣವಿಲ್ಲದೆ ಖಾತೆಗಳು ಸ್ತಬ್ಧಗೊಂಡಿದ್ದರಿಂದ ಬಳಕೆದಾರರು ಕಂಗಾಲಾಗಿದ್ದಾರೆ.
ಈ ತಾಂತ್ರಿಕ ಸಮಸ್ಯೆಯು ಸೋಮವಾರ ರಾತ್ರಿ 8 ಗಂಟೆ (IST) ಸುಮಾರಿಗೆ ಬೆಳಕಿಗೆ ಬಂದಿತು.
ಆ್ಯಪ್ ತೆರೆದ ತಕ್ಷಣ ಬಳಕೆದಾರರಿಗೆ, ಪ್ಲಾಟ್‌ಫಾರ್ಮ್‌ನ ‘ಸೇವಾ ನಿಯಮ’ಗಳ (Terms of Service) ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಖಾತೆಯ ಚಟುವಟಿಕೆ ಮತ್ತು ಸಾಧನದ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂಬ ಸಂದೇಶ ಗೋಚರಿಸಿತು.
ಸಾಮಾನ್ಯವಾಗಿ 24 ಗಂಟೆಗಳ ಒಳಗೆ ಇದರ ಫಲಿತಾಂಶ ತಿಳಿಯಲಿದೆ ಎಂದೂ, ಜವಾಬ್ದಾರಿಯುತ ಬಳಕೆ ಹಾಗೂ ಕಳುವಾದ ಫೋನ್‌ಗಳು ಮತ್ತು ಸುರಕ್ಷತೆಗೆ ಭಂಗ ಬಂದ ಖಾತೆಗಳ (Compromised accounts) ಕುರಿತ ಮಾರ್ಗದರ್ಶನದತ್ತ ಈ ಪರದೆಯು ಬಳಕೆದಾರರನ್ನು ನಿರ್ದೇಶಿಸಿತು.
ವಾಟ್ಸಾಪ್ ಸ್ಪಷ್ಟನೆ
ಈ ಹಠಾತ್ ಬೆಳವಣಿಗೆಯ ಕುರಿತು ಪ್ರತಿಕ್ರಿಯೆ ನೀಡಿರುವ ವಾಟ್ಸಾಪ್ ವಕ್ತಾರರು, ಪ್ಲಾಟ್‌ಫಾರ್ಮ್‌ನ ದುರ್ಬಳಕೆ ತಡೆಯಲು ಕಂಪನಿ ನಿರಂತರವಾಗಿ ಶ್ರಮಿಸುತ್ತಿದೆ ಎಂದಿದ್ದಾರೆ.
”ನಮ್ಮ ಸೇವೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಇತರ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಖಾತೆಗಳನ್ನು ನಿಷೇಧಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಕೆಲವೊಮ್ಮೆ ನಮ್ಮಿಂದ ತಪ್ಪುಗಳಾಗಬಹುದು; ಹಾಗಾದಲ್ಲಿ, ಜನರು ಮತ್ತೆ ಚಾಟಿಂಗ್ ಮುಂದುವರಿಸಲು ಸಾಧ್ಯವಾಗುವಂತೆ ನಾವು ಆದಷ್ಟು ಬೇಗ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದು
ವಾಟ್ಸಾಪ್ ವಕ್ತಾರರ ಸ್ಪಷ್ಟನೆ ನೀಡಿದ್ದಾರೆ.
ಬಳಕೆದಾರರ ಆಕ್ರೋಶ
ಯಾವುದೇ ಪೂರ್ವಸೂಚನೆ ನೀಡದೆ ಖಾತೆಗಳನ್ನು ಅಮಾನತುಗೊಳಿಸಿರುವುದಕ್ಕೆ ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘X’ (ಟ್ವಿಟರ್) ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆತಂಕ ಮತ್ತು ಆಕ್ರೋಶ ಹೊರಹಾಕಿದ್ದಾರೆ:
ಮೇಲ್ಮನವಿ ಸಲ್ಲಿಸಿದರೂ ಯಾವುದೇ ಸಮರ್ಪಕ ವಿವರಣೆಯಿಲ್ಲದೆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಒಬ್ಬ ಬಳಕೆದಾರರು ದೂರಿದ್ದಾರೆ.
ಕೇವಲ ಅಧಿಕೃತ ವಾಟ್ಸಾಪ್ ಆ್ಯಪ್ ಅನ್ನು ಮಾತ್ರ ಬಳಸುತ್ತಿದ್ದರೂ, ದೈನಂದಿನ ಕೆಲಸಗಳಿಗೆ ಈ ಸೇವೆ ಅತ್ಯಗತ್ಯವಾಗಿದ್ದರೂ ಯಾವುದೇ ಮುನ್ನೆಚ್ಚರಿಕೆಯಿಲ್ಲದೆ ಖಾತೆ ಅಮಾನತಾಗಿದೆ ಎಂದು ಮತ್ತೊಬ್ಬರು ಅಳಲು ತೋಡಿಕೊಂಡಿದ್ದಾರೆ.
”ಸೋಮವಾರ ಸಂಜೆ WhatsApp ಹಠಾತ್ತನೆ ಅನೇಕ ಬಳಕೆದಾರರ ಖಾತೆಗಳನ್ನು ತನಿಖೆಗೆ ಒಳಪಡಿಸಿತು… ಇದರ ಪರಿಣಾಮವಾಗಿ, ಅವರು 24 ಗಂಟೆಗಳ ಕಾಲ ಆ್ಯಪ್‌ನ ಸೌಲಭ್ಯಗಳನ್ನು ಬಳಸಲು ಸಾಧ್ಯವಾಗಲಿಲ್ಲ. ಈ ಕ್ರಮವು ಭಾರತ ಮತ್ತು ಇತರ ಹಲವು ಕಡೆಗಳಲ್ಲಿ ಜನರನ್ನು ಹತಾಶರನ್ನಾಗಿಸಿದೆ” ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
‘ಮೆಟಾ’ ಸ್ಪಷ್ಟನೆ
ಮೆಟಾ ಮತ್ತು ಸಂಸದೀಯ ಸಮಿತಿ
ಇದೇ ವೇಳೆ, ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ಪೋಸ್ಟ್ ಒಂದರ ಮೇಲೆ ವಿಧಿಸಲಾಗಿದ್ದ ಅಲ್ಪಕಾಲೀನ ನಿರ್ಬಂಧಕ್ಕಾಗಿ ಕ್ಷಮೆ ಕೋರಲು ಸಿದ್ಧವಿರುವುದಾಗಿ ಸಾಮಾಜಿಕ ಜಾಲತಾಣ ದಿಗ್ಗಜ ‘ಮೆಟಾ’ (Meta) ಸೋಮವಾರ ಸಂಸದೀಯ ಸಮಿತಿಯೊಂದಕ್ಕೆ ತಿಳಿಸಿದೆ ಎಂದು ವರದಿಯಾಗಿದೆ. ಜವಾಬ್ದಾರಿಯನ್ನು ನಿಗದಿಪಡಿಸುವಂತೆ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ಈ ಸ್ಪಷ್ಟನೆ ಹೊರಬಿದ್ದಿದೆ.
ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ, ಭಾರತದಿಂದ ಗಣನೀಯ ಆದಾಯ ಗಳಿಸುತ್ತಿದ್ದರೂ ಕಂಪನಿಯು ದೇಶದ ಕಾನೂನು ಚೌಕಟ್ಟನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ಸದಸ್ಯರು ತೀವ್ರವಾಗಿ ವಾದಿಸಿದ್ದರು. ಭಾರತೀಯ ಕಾನೂನುಗಳ ಅನುಸರಣೆ ಮತ್ತು ಬಳಕೆದಾರರ ದತ್ತಾಂಶ ಸುರಕ್ಷತೆಯ ಕುರಿತು ಈ ವೇಳೆ ಮೆಟಾ ಕಂಪನಿಯನ್ನು ಕಠಿಣವಾಗಿ ಪ್ರಶ್ನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

