ಮಾನವೀಯತೆಯೇ ನಾಚುವಂತಹ ಘಟನೆಯೊಂದು ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ತನ್ನ ಪ್ರೇಯಸಿಯನ್ನು ಅತ್ಯಾಚಾರ ಮಾಡಿ, ಭೀಕರವಾಗಿ ಕೊಲೆಗೈದ ಆರೋಪಿ ಪಿಯೂಷ್ ಧಮ್ನೋಟಿಯಾ, ಈಗ ಪೊಲೀಸರ ಮುಂದೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ವಿಕೃತವಾಗಿ ನಗುವ ಮೂಲಕ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದಾನೆ.
ತನ್ನ 24 ವರ್ಷದ ಎಂಬಿಎ ಸಹಪಾಠಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದ ಮೇಲೆ ಬಂಧಿತನಾಗಿರುವ ಪಿಯೂಷ್ನನ್ನು ಪೊಲೀಸರು ವಿಚಾರಣೆಗೆ ಕರೆತಂದಾಗ, ಮಾಧ್ಯಮದವರು ಆತನನ್ನು ಪ್ರಶ್ನಿಸಿದರು. ಈ ವೇಳೆ ಯಾವುದೇ ಭಯವಿಲ್ಲದೆ ನಕ್ಕ ಆತ, “ಜೋ ಹೊ ಗಯಾ ವೋ ಹೊ ಗಯಾ” (ಆಗಿದ್ದು ಆಗಿಹೋಯ್ತು ಬಿಡಿ) ಎಂದು ಉದ್ಧಟತನದಿಂದ ಉತ್ತರಿಸಿದ್ದಾನೆ. “ಯಾಕೆ ಕೊಂದೆ ಎಂದು ಈಗ ಕೇಳಿ ಏನು ಮಾಡುತ್ತೀರಿ? ಸಮಯ ಬಂದಾಗ ಎಲ್ಲವನ್ನೂ ಸರಿಯಾಗಿ ವಿವರಿಸುತ್ತೇನೆ” ಎಂದು ತಣ್ಣನೆಯ ಧನಿಯಲ್ಲಿ ಹೇಳಿರುವುದು ಸಾರ್ವಜನಿಕರನ್ನು ಕೆರಳಿಸಿದೆ.
ಪಶ್ಚಾತ್ತಾಪವಿಲ್ಲದ ಕ್ರೂರಿ
ಹಸ್ತಬಂಧನಕ್ಕೊಳಗಾಗಿ ಪೊಲೀಸ್ ಠಾಣೆಯ ಹೊರಗೆ ಬರುತ್ತಿದ್ದಾಗ, “24 ವರ್ಷದ ಎಂಬಿಎ ವಿದ್ಯಾರ್ಥಿನಿಯನ್ನು ಏಕೆ ಕೊಂದೆ?” ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಆತ ತಣ್ಣನೆಯ ಧನಿಯಲ್ಲಿ, ಮುಖದ ಮೇಲೆ ವಿಕೃತ ನಗು ಬೀರುತ್ತಾ “ಜೋ ಹೊ ಗಯಾ ವೋ ಹೊ ಗಯಾ” (ಆಗಿದ್ದು ಆಗಿಹೋಯ್ತು) ಎಂದು ಉತ್ತರಿಸಿದ್ದಾನೆ.
“ಏನೂ ಆಗಿಲ್ಲ ಬಿಡಿ, ಆಗಿದ್ದಾಯ್ತು. ಈಗ ಅದನ್ನು ತಿಳಿದುಕೊಂಡು ಏನು ಮಾಡುತ್ತೀರಿ? ಸರಿಯಾದ ಸಮಯ ಬಂದಾಗ ಎಲ್ಲರಿಗೂ ಕಾರಣವನ್ನು ವಿವರವಾಗಿ ಹೇಳುತ್ತೇನೆ” ಎಂದು ಆತ ಉದ್ಧಟತನದಿಂದ ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಭೀಕರ ಹಿನ್ನೆಲೆ:
ಫೆಬ್ರವರಿ 11 ರಂದು ಇಂದೋರ್ನ ಬಾಡಿಗೆ ಫ್ಲಾಟ್ನಲ್ಲಿ ತನ್ನ ಸಹಪಾಠಿಯೂ ಆಗಿದ್ದ ಪ್ರೇಯಸಿಯನ್ನು ಪಿಯೂಷ್ ಕೊಲೆ ಮಾಡಿದ್ದನು. ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಆತ, ಕೊಂದ ನಂತರವೂ ಆಕೆಯ ಮೃತದೇಹದ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕೊಲೆಯ ನಂತರ ಮುಂಬೈಗೆ ಪರಾರಿಯಾಗಿದ್ದ ಈತ, ಅಲ್ಲಿ ಆಕೆಯ ಆತ್ಮದೊಂದಿಗೆ ಮಾತನಾಡಲು ಮತ್ತು ಕ್ಷಮೆಯಾಚಿಸಲು ಕ್ಷುದ್ರ ಪೂಜೆ (Occult rituals) ಹಾಗೂ ಮಾಟಮಂತ್ರ ಮಾಡಲು ಯತ್ನಿಸಿದ್ದಾನೆ. ಇದಕ್ಕಾಗಿ ಆತ ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ನೋಡಿ ಕಲೆತಿದ್ದ ಎನ್ನಲಾಗಿದೆ.ಕೊಲೆ ಮಾಡಿದ ನಂತರ ಆಕೆಯ ಫೋನ್’ನಿಂದ ಅವರಿಬ್ಬರ ಖಾಸಗಿ ವಿಡಿಯೋಗಳನ್ನು ಕಾಲೇಜು ಗ್ರೂಪ್ ಮತ್ತು ಆಕೆಯ ಎಲ್ಲಾ ಕಾಂಟ್ಯಾಕ್ಟ್’ಗಳಿಗೆ ಕಳುಹಿಸಿ ಆಕೆಯ ಚಾರಿತ್ರ್ಯ ಹರಣಕ್ಕೆ ಯತ್ನಿಸಿದ್ದಾನೆ.
ಫೆಬ್ರವರಿ 13 ರಂದು ಫ್ಲಾಟ್ನಿಂದ ದುರ್ವಾಸನೆ ಬಂದಾಗ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಫೆಬ್ರವರಿ 14 ರಂದು ಮುಂಬೈನ ಅಂಧೇರಿಯಲ್ಲಿ ಈತನನ್ನು ಬಂಧಿಸಿದ್ದಾರೆ. ಫೆಬ್ರವರಿ 18 ರಂದು ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದಾರೆ.

