ಬೆಂಗಳೂರು : ರಾಜ್ಯದ ಗ್ರಾಮ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಭೂ ದಾಖಲೆಗಳ ನಿಖರತೆಯನ್ನು ಖಚಿತಪಡಿಸಲು ಜಮಾಬಂದಿ ಪರಿಶೀಲನೆಗೆ ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ತಹಸೀಲ್ದಾರರು ತಮ್ಮ ವ್ಯಾಪ್ತಿಯ ಕನಿಷ್ಠ ಶೇಕಡಾ 80ರಷ್ಟು ಗ್ರಾಮಗಳ ಲೆಕ್ಕಗಳನ್ನು ಪರಿಶೀಲಿಸುವುದು, ಪಹಣಿ ಪತ್ರಿಕೆಗಳು, ಹಕ್ಕು ದಾಖಲಾತಿಗಳು, ಭೂ ಮಂಜೂರಾತಿ ಷರತ್ತುಗಳು, ಅತಿಕ್ರಮಣ, ಕೆರೆ-ಏರಿಗಳು, ಸರ್ಕಾರಿ ಜಾಗಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳವರೆಗೆ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ.
ರಾಜ್ಯದ ತಹಶೀಲ್ದಾರ್ ರವರ ಪ್ರಮುಖ ಕರ್ತವ್ಯಗಳೇನು..? ಇಲ್ಲಿದೆ ಕಂಪ್ಲೀಟ್ ಮಾಹಿತಿ
1) ಗ್ರಾಮಗಳ ಲೆಕ್ಕಗಳ ಪರಿಶೀಲನೆ: ತಾಲ್ಲೂಕಾ ಜಮಾಬಂದಿ ಅಧಿಕಾರಿಯಾಗಿರುವ ತಹಸೀಲ್ದಾರರು, ಅವರ ತಾಲ್ಲೂಕಾ ವ್ಯಾಪ್ತಿಯ ಶೇಕಡಾ 80 ರಷ್ಟು ಗ್ರಾಮಗಳ ಲೆಕ್ಕಗಳನ್ನು ಪರಿಶೀಲಿಸಿ, ಸರಿಯಾದ ಲೆಕ್ಕ ಹೊಂದಾಣಿಕೆಗಳನ್ನು ತಯಾರಿಸಿ, ಬಾಕಿ ಮೊತ್ತವನ್ನು ಸರಿಯಾಗಿ, ನಮೂದಿಸತಕ್ಕದ್ದು. ಹಾಗೆಯೇ, ಹಜೂರು ಜಮಾಬಂದಿ ಅಧಿಕಾರಿಗಳಿಂದ ಅಂತಿಮ ಅನುಮೋದನೆ ಪಡೆಯಲು ಲೆಕ್ಕ ವರದಿಯನ್ನು ಸಿದ್ಧಪಡಿಸಿಟ್ಟುಕೊಂಡಿರಬಹುದು.
2) ಪಹಣಿ ಪತ್ರಿಕೆಗಳ ಪರಿಶೀಲನೆ: ಪಹಣಿ ಪತ್ರಿಕೆಗಳನ್ನು ತೀವ್ರವಾಗಿ ಪರಿಶೀಲಿಸಬೇಕು. ಗ್ರಾಮಲೆಕ್ಕಾಧಿಕಾರಿಗಳು ಸರಿಯಾಗಿ ಪಹಣಿ ಬರೆದಿರುವುದನ್ನು ಕಂದಾಯ ನಿರೀಕ್ಷಕರು/ತಹಸೀಲ್ದಾರರು ಪರಿಶೀಲಿಸತಕ್ಕದ್ದು. ಹಾಗೂ ವಿವಿಧ ಬೆಳೆಗಳ ಬಗ್ಗೆ ನಿರ್ವಹಿಸಿದ ಬೆಳೆ ಪತ್ರಿಕೆ ಪರಿಶೀಲಿಸುವುದು (ನಮೂನೆ ನಂ 1 (ಅ)) ರಲ್ಲಿ ಮಾಹಿತಿ ಪಡೆಯುವದು.
3) ಆಕಾರಬಂದ ಹಾಗೂ ಪಹಣಿ ಪತ್ರಿಕೆ: ಆಕಾರ ಬಂದದಲ್ಲಿ ನಮೂದಿಸಿದ ಕ್ಷೇತ್ರ ಹಾಗೂ ಪಹಣಿ ಪತ್ರಿಕೆಗಳಲ್ಲಿ ನಮೂದಿಸಿದ ಗ್ರಾಮದ ಒಟ್ಟು ಕ್ಷೇತ್ರ, ಆಕಾರಗಳ ಸಮನ್ವಯತೆಯನ್ನು ಪರಿಶೀಲಿಸಬೇಕು. ಹೆಚ್ಚು/ಕಡಿಮೆ ಇದ್ದಲ್ಲಿ, ಅಂತಹ ಲೋಪ ದೋಷಗಳನ್ನು ಕಂಡು ಹಿಡಿದು ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಆಕಾರ ಬಂದದಲ್ಲಿ ನಮೂದಿಸಿದ ಕ್ಷೇತ್ರಕ್ಕೆ ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದು. (ನಮೂನೆ ನಂ 1) ಹಾಗೆಯೇ ಓದುವಳಿದಾರ ತಃಖ್ಯೆಯನ್ನು ನಿರ್ವಹಿಸಿರುವುದನ್ನು ಪರಿಶೀಲಿಸುವುದು (ನಮೂನೆ ನಂ 1 (ಬಿ)).
4) ತಕರಾರು ಪೈಸಲ್ ತಃಖ್ಯೆ: ಗ್ರಾಮಲೆಕ್ಕಾಧಿಕಾರಿಗಳು ತಕರಾರು ಪೈಸಲ್ ತಃಖ್ಯೆಯನ್ನು ಸರಿಯಾಗಿ ನಿರ್ವಹಿಸಿದ ಬಗ್ಗೆ ಪರಿಶೀಲಿಸುವುದು. ಅನಧಿಕೃತ ತಬರಿಯವರಿಗೆ ಟಿ.ಟಿ. ದಂಡ ವಿಧಿಸಿದ್ದರ ಬಗ್ಗೆ ಪರಿಶೀಲಿಸುವುದು ಹಾಗೂ ಭೂ ಮಂಜೂರಾತಿ ಷರತ್ತುಗಳನ್ನು ಉಲ್ಲಂಘಿಸಿದ್ದರೆ ವಿವರಗಳನ್ನು ಕೂಡ ಪರಿಶೀಲಿಸುವುದು.
5) ಕಮ್ಮಿ/ಜಾಸ್ತಿ ತಃಖ್ಯೆ ಮತ್ತು ಆದೇಶಗಳು: ಈ ತಃಖ್ಯೆಯನ್ನು ಕಳೆದ ವಾರ್ಷಿಕ ಲೆಕ್ಕ ತಃಖ್ಯೆ ಆಧಾರದ ಮೇಲೆ ತಯಾರಿಸಬೇಕು. ತಪ್ಪು ನಿರ್ಧರಣೆಯಾದಲ್ಲಿ/ ಕಮ್ಮಿ/ ಜಾಸ್ತಿಯಾದಲ್ಲಿ, ಅದನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಹಾಗೂ ಈ ಬಗ್ಗೆ ಸಕ್ಷಮ ಅಧಿಕಾರಿಗಳಿಂದ ಸೂಕ್ತ ಆದೇಶ ಪಡೆಯಲು ಕ್ರಮ ಜರುಗಿಸುವುದು (ನಮೂನೆ 2).
6) ವಾರ್ಷಿಕ ಲೆಕ್ಕಗಳ ಹೊಂದಾಣಿಕೆಯನ್ನು ನಿಗದಿಪಡಿಸಿದ ನಮೂನೆಯಲ್ಲಿ ತಯಾರಿಸುವುದು (ನಮೂನೆ 3).
7) ಕಂದಾಯ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಬಾಕಿ ಪಟ್ಟಿಗಳನ್ನು ತಯಾರಿಸುವುದು. ಭೂ ಕಂದಾಯ/ನೀরাವರಿ ಕರ/ಸಾಲಗಳು/ಇತರ ಸರ್ಕಾರಿ ಬಾಕಿ ಕುರಿತು ನಿರ್ವಹಿಸಲಾದ ಕುಳವಾರು ಬಾಕಿ ಪಟ್ಟಿಯನ್ನು ಹಾಗೂ ವಸೂಲಾತಿಯ ವಿವರಗಳನ್ನು ಮತ್ತು ಬಾಕಿ ವಿವರಗಳನ್ನು ಕಾಲೋಚಿತಗೊಳಿಸಿರುವುದನ್ನು ಪರಿಶೀಲಿಸುವುದು (ನಮೂನೆ 4 ಹಾಗೂ 5).
8) ಹಕ್ಕು ದಾಖಲಾತಿಗಳನ್ನು ಕಾಲೋಚಿತಗೊಳಿಸುವುದು. ಭೂಕಂದಾಯ ಅಧಿನಿಯಮ 128ರ ಅಡಿಯಲ್ಲಿ ಬಾಕಿ ಇರುವ ಎಲ್ಲಾ ಖಾತೆ ಬದಲಾವಣೆ ಪ್ರಕರಣಗಳ ಬಗ್ಗೆ ವರದಿಯನ್ನು ಪಡೆದುಕೊಂಡು ತಕರಾರು ರಹಿತ ಪ್ರಕರಣಗಳ ವಿಲೇವಾರಿಯನ್ನು ನಿಗದಿತ ಅವಧಿಯಲ್ಲಿ ಮಾಡುವುದು ಹಾಗೂ ತಕರಾರು ಪ್ರಕರಣಗಳನ್ನು ಉಭಯ ಪಕ್ಷದವರಿಗೆ ಸೂಕ್ತ ಆದೇಶ ನೀಡಿ ಅದಷ್ಟು ತೀವ್ರವಾಗಿ ಮಾಡಿರುವದನ್ನು ಪರಿಶೀಲಿಸುವುದು. ಅನಾವಶ್ಯಕವಾಗಿ ವಿಳಂಬ ಮಾಡಿದ ಸಂದರ್ಭಗಳನ್ನು ಪರಿಶೀಲಿಸುವುದು ಹಾಗೂ ಸೂಕ್ತ ತಿಳುವಳಿಕೆ ನೀಡಲು ಕ್ರಮ ಜರುಗಿಸುವುದು (ನಮೂನೆ 6(i), (ii), (iii)). ಮರಣ ದಾಖಲೆಗಳನ್ನು ಪರಿಶೀಲಿಸಿ, ಖಾತೆದಾರರು ಮೃತಪಟ್ಟಲ್ಲಿ, ಸದರಿಯವರ ವಾರಸುದಾರರ ಹೆಸರುಗಳನ್ನು ಗ್ರಾಮದಪರದಲ್ಲಿ ದಾಖಲಿಸಲು ಕ್ರಮ ಜರುಗಿಸಿದ್ದರೆ ವಿವರಗಳನ್ನು ಪರಿಶೀಲಿಸುವುದು. ಹಕ್ಕು ದಾಖಲೆ ತಕರಾರು ಪ್ರಕರಣಗಳ ವಿವರಗಳನ್ನು ಪರಿಶೀಲಿಸಿ, ಅವಶ್ಯಕ ನಿರ್ದೇಶನಗಳನ್ನು ನೀಡುವುದು.
9) ಸಾಲದ ರಿಜಿಸ್ಟರಗಳ ಲೆಕ್ಕ ಹೊಂದಾಣಿಕೆ: ತಹಸೀಲ್ದಾರ ಕಾರ್ಯಾಲಯದಲ್ಲಿ ನಿರ್ವಹಿಸಿದ ಸಾಲಗಳ ರಿಜಿಸ್ಟರಗಳೊಂದಿಗೆ, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ನಿರ್ವಹಿಸಿದ ರಿಜಿಸ್ಟರಗಳೊಂದಿಗೆ ತಾಳೆ ನೋಡಬೇಕು ಹಾಗೂ ಲೆಕ್ಕ ಹೊಂದಾಣಿಕೆ ಮಾಡಿಕೊಳ್ಳಬೇಕು.
10) ಬೇಡಿಕೆ ಪಟ್ಟಿಗಳನ್ನು ಕಾಲೋಚಿತಗೊಳಿಸುವುದು. ವಿವಿಧ ಕಾಯ್ದೆಗಳಡಿ, ಸರ್ಕಾರಕ್ಕೆ ಪಾವತಿಯಾಗಿರುವ ಮೊತ್ತವನ್ನು ಬೇಡಿಕೆ ತಃಖ್ಯೆಯಲ್ಲಿ ದಾಖಲಿಸಿಕೊಂಡು ಕಾಲೋಚಿತಗೊಳಿಸಬೇಕು.
11) ಭೂ ಮಂಜೂರಾತಿ ಷರತ್ತುಗಳ ಉಲ್ಲಂಘನೆ ಪ್ರಕರಣಗಳ ಪರಿಶೀಲನೆ ಭೂಸುಧಾರಣೆ/ಭೂಮಂಜೂರಾತಿ ಅಥವಾ ಇತರ ಕಾಯ್ದೆಯಡಿ ಮಂಜೂರಾದ ಜಮೀನುಗಳ ಬಗ್ಗೆ ವಿಧಿಸಲಾದ ಷರತ್ತುಗಳನ್ನು ಪಾಲಿಸಲಾಗಿದೆಯೇ? ಹೇಗೆ ಎಂಬುದನ್ನು ಪರಿಶೀಲಿಸತಕ್ಕದ್ದು, ಷರತ್ತುಗಳ ಉಲ್ಲಂಘನೆಯಾಗಿದ್ದಲ್ಲಿ, ಸ್ಥಾನಿಕ ವಿಚಾರಣೆ ಜರುಗಿ, ನಿಯಮಗಳನುಸಾರ ಕ್ರಮ ಜರುಗಿಸುವುದು. (ನಮೂನೆ-7).
12) ಜನನ/ಮರಣ ನೋಂದಣಿ ಗ್ರಾಮಲೆಕ್ಕಾಧಿಕಾರಿಗಳು ಜನನ/ಮರಣ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡುವುದು. ಅವಶ್ಯವೆನಿಸಿದಲ್ಲಿ, ಸ್ಥಾನಿಕ ವಿಚಾರಣೆ ಜರುಗಿಸುವುದು.
- ಅತಿಕ್ರಮಣ: ಗ್ರಾಮದಲ್ಲಿ ಸಾರ್ವಜನಿಕ ಸ್ಥಳ ಅತಿಕ್ರಮಣಗೊಳ್ಳದಿದ್ದಲ್ಲಿ, ಅದನ್ನು ಸ್ಥಳದಲ್ಲಿಯೇ ತೆಗೆಯಲು ಕ್ರಮ ಜರುಗಿಸತಕ್ಕದ್ದು.
- ಕೆರೆ ಮತ್ತು ಕೆರೆ ಏರಿಗಳು: ಜಮಾಬಂದಿ ಅಧಿಕಾರಿಗಳು ಕೆರೆ/ಕೆರೆ ಏರಿಗಳನ್ನು ಪರಿಶೀಲಿಸುವುದು. ಇವುಗಳ ಸಮರ್ಪಕ ನಿರ್ವಹಣೆ ಬಗ್ಗೆ ಅವಶ್ಯಕ ಕ್ರಮ ಜರುಗಿಸುವುದು (ನಮೂನೆ 8).
- ಹದ್ದು ಬಸ್ತುಗಳು: ಹದ್ದು ಬಸ್ತುಗಳು ಸರಿಯಾಗಿರುವ ಬಗ್ಗೆ ಪರಿಶೀಲನೆ ಮಾಡುವುದು.
- ಸಿ ಮತ್ತು ಡಿ ವರ್ಗದ ಜಮೀನುಗಳು: ಸಿ ಮತ್ತು ಡಿ ವರ್ಗದ ಜಮೀನುಗಳನ್ನು ಅರಣ್ಯ ಇಲಾಖೆಗೆ ನೀಡಲಾಗಿದ್ದು, ಸದರಿಯವರು ಅರಣ್ಯ ಬೆಳೆಸಿದ ಬಗ್ಗೆ ಪರಿಶೀಲಿಸುವುದು. ಸರ್ಕಾರಿ ಜಾಗಗಳು ಲಭ್ಯವಿದ್ದಲ್ಲಿ, ಅವುಗಳನ್ನು ಸರ್ಕಾರಿ ಕಾರ್ಯಾಲಯಗಳ ನಿರ್ಮಾಣ ಕುರಿತು ಕಾಯ್ದಿರಿಸಿರುವದನ್ನು ಪರಿಶೀಲಿಸುವುದು.
- ಅಭಿವೃದ್ಧಿ ವಿಷಯಗಳು: ಬೇರೆ ಬೇರೆ ಅಭಿವೃದ್ಧಿ ಇಲಾಖೆಗಳು ಗ್ರಾಮದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸುವುದು ಹಾಗೂ ಆ ಬಗ್ಗೆ ಗ್ರಾಮಲೆಕ್ಕಾಧಿಕಾರಿ ವಿವರವನ್ನು ನಮೂದಿಸಿರುವುದನ್ನು ಪರಿಶೀಲಿಸುವುದು. ಅಭಿವೃದ್ಧಿ ಕಾರ್ಯಕ್ರಮದಡಿ, ಸಾಮಗ್ರಿಗಳ ಉಚಿತ ವಿತರಣೆ ಪರಿಶೀಲಿಸುವುದಲ್ಲದೇ ಬೇರೆ ಬೇರೆ ಅನುಷ್ಠಾನಾಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಲ್ಲಿ, ಅವುಗಳನ್ನು ಕೂಡ ಪರಿಶೀಲಿಸುವುದು (ನಮೂನೆ-9).
- ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಶಕ್ತಿ ಪೂರೈಕೆ ಆಗುತ್ತಿರುವ ಬಗ್ಗೆ ಪರಿಶೀಲನೆ ಮಾಡುವುದು.
- ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ, ಆರಾಧನಾ ಯೋಜನೆ/ಮಂದಿರಗಳ ನಿರ್ಮಾಣ, ನಿರ್ವಹಣೆಗಳನ್ನು ಹಾಗೂ ಈ ಕುರಿತಾಗಿ ನಿರ್ವಹಿಸಿದ ಅಂಕಿ ಅಂಶಗಳನ್ನು ಪರಿಶೀಲಿಸುವುದು.
- ಸಾರ್ವಜನಿಕ ಮತ್ತು ಆರ್ಥಿಕ ಕಾರ್ಯಕ್ರಮಗಳಡಿ ಕೈಗೊಂಡಿರುವ ನಾಗರಿಕ ಸೌಲಭ್ಯಗಳ ಬಗ್ಗೆ ವಿಚಾರಿಸುವುದು ಹಾಗೂ ಈ ಕುರಿತಾದ ಅಂಕಿ ಅಂಶಗಳನ್ನು ಪರಿಶೀಲಿಸುವುದು.




