ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಡಬಲ್ ಸೆಂಚೂರಿ ಸಾಧನೆ ಮಾಡಿರುವ ಬಿಜೆಪಿ ಇದೇ ಮೊದಲ ಬಾರಿ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದೆ. ಬಂಗಾಳ ಚುನಾವಣೆಯಲ್ಲಿ 206 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಮೊದಲ ಸರ್ಕಾರ ರಚನೆಗೆ ಮುಹೂರ್ತ ಫಿಕ್ಸ್ ಮಾಡಿದ್ದು, ನೂತನ ಮುಖ್ಯಮಂತ್ರಿ ಪ್ರಮಾಣವಚನ ದಿನಾಂಕವನ್ನು ಘೋಷಿಸಿದೆ.
ಬಿಜೆಪಿಯ ಅಭೂತಪೂರ್ವ ಗೆಲುವಿನೊಂದಿಗೆ ಬಂಗಾಳದಲ್ಲಿ ಕೇಸರಿ ಯುಗಾರಂಭವಾಗಲಿದ್ದು, 15 ವರ್ಷಗಳ ದೀದಿ ಮಮತಾ ಬ್ಯಾಅನರ್ಜಿ ಅವರ ಆಳ್ವೆಕೆ ಅಂತ್ಯವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಮೇ 9 ರಂದು ಬಿಜೆಪಿಯ ಮೊದಲ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಅಂದು ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 9ರಂದು ರವೀಂದ್ರನಾಥ ಠ್ಯಾಗೋರ್ ಅವರ ಜನ್ಮದಿನವಿದ್ದು, ಅಂದೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಿರ್ಧರಿಸಿದೆ. ಅಂದೇ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ನಡೆಯಲಿದ್ದು, ಎನ್‌ಡಿಎ ಆಡಳಿತವಿರುವ ಎಲ್ಲ ರಾಜ್ಯಗಳ ಸಿಎಂಗಳಿಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 206 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದೊಂದು ಐತಿಹಾಸಿಕ ಗೆಲುವು. ಈ ಜನಾದೇಶವು ಜನರ ಬದಲಾವಣೆ ಮತ್ತು ಭಯದಿಂದ ಮುಕ್ತ ಭವಿಷ್ಯದ ಬಯಕೆಯನ್ನು ಪ್ರತಿಬಿಂಬಿಸುತ್ತದೆ. ಈ. ಫಲಿತಾಂಶದ ಹಿಂದೆ ಮಹಿಳಾ ಮತದಾರರ ನಿರ್ಣಾಯಕ ಶಕ್ತಿಯಿದೆ. ಜೊತೆಗೆ ರಾಜಕೀಯ ಹಿಂಸಾಚಾರವನ್ನು ಕೊನೆಗಾಣಿಸಲು ಜನರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
294 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲು 148 ಬಹುಮತದ ಅವಶ್ಯಕತೆಯಿದೆ. ಈ ಪೈಕಿ 206 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ.

