ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸಲಿರುವ 338 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಇರುವುದಾಗಿ ಸ್ವತಃ ಅಭ್ಯರ್ಥಿಗಳೇ ಘೋಷಿಸಿದ್ದಾರೆ. ಈ ಬಗ್ಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ.
ಪಶ್ಚಿಮ ಬಂಗಾಳದ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸಿರುವ 1,445 ಅಭ್ಯರ್ಥಿಯಲ್ಲಿ 338 ಅಂದರೆ, ಶೇ 23ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದರೆ, 295 ಅಂದರೆ, ಶೇ 20ರಷ್ಟು ಜನರು ತಮ್ಮ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿದೆ ಎಂದು ಘೋಷಿಸಿದ್ದಾರೆ. 16 ಅಭ್ಯರ್ಥಿಗಳ ವಿರುದ್ಧ ಕೊಲೆ ಪ್ರಕರಣಗಳಿವೆ. 80 ಅಭ್ಯರ್ಥಿಗಳು ಕೊಲೆ ಯತ್ನ ಪ್ರಕರಣ ಹೊಂದಿರುವುದಾಗಿ ಉಮೇದುವಾರಿಕೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿಯಿಂದ 141 ಅಭ್ಯರ್ಥಿಗಳಲ್ಲಿ 102 (ಶೇ. 72), ಟಿಎಂಸಿಯಿಂದ 142 ಅಭ್ಯರ್ಥಿಗಳಲ್ಲಿ 49 (ಶೇ. 35), ಸಿಪಿಐ(ಎಂ) ನಿಂದ 100 ಅಭ್ಯರ್ಥಿಗಳಲ್ಲಿ 51 (ಶೇ. 51) ಮತ್ತು ಕಾಂಗ್ರೆಸ್‌ನಿಂದ 142 ಅಭ್ಯರ್ಥಿಗಳಲ್ಲಿ 37 (ಶೇ. 26) ಜನರು ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.
ಇದರಲ್ಲಿ 142 ಕ್ಷೇತ್ರಗಳ ಪೈಕಿ 63 (ಶೇ 44) ಕ್ಷೇತ್ರಗಳು ರೆಡ್ ಅಲರ್ಟ್ ಕ್ಷೇತ್ರಗಳಾಗಿದ್ದು, ಇಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.
ಇನ್ನು 1,445 ಅಭ್ಯರ್ಥಿಗಳಲ್ಲಿ 321 ಅಂದರೆ ಶೇ. 22 ಅಭ್ಯರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದು, ಶ್ರೀಮಂತ ಅಭ್ಯರ್ಥಿಗಳಾಗಿದ್ದಾರೆ.
ಪ್ರಮುಖ ಪಕ್ಷಗಳ ಪೈಕಿ, ಟಿಎಂಸಿಯಿಂದ 142 ಅಭ್ಯರ್ಥಿಗಳಲ್ಲಿ 103 (ಶೇ. 73), ಬಿಜೆಪಿಯಿಂದ 141 ಅಭ್ಯರ್ಥಿಗಳಲ್ಲಿ 73 (ಶೇ. 52), ಕಾಂಗ್ರೆಸ್‌ನಿಂದ 142 ಅಭ್ಯರ್ಥಿಗಳಲ್ಲಿ 36 (ಶೇ. 25) ಮತ್ತು ಸಿಪಿಐ(ಎಂ)ನಿಂದ 100 ಅಭ್ಯರ್ಥಿಗಳಲ್ಲಿ 33 (ಶೇ. 33) ಜನರು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಎರಡನೇ ಹಂತದಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 1.21 ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ.
142 ಟಿಎಂಸಿ ಅಭ್ಯರ್ಥಿಗಳ ಸರಾಸರಿ ಆಸ್ತಿ 5.05 ಕೋಟಿ ರೂ., ಬಿಜೆಪಿಯ 141 ಅಭ್ಯರ್ಥಿಗಳ ಸರಾಸರಿ ಆಸ್ತಿ 3.28 ಕೋಟಿ ರೂ., ಸಿಪಿಐ(ಎಂ)ನ 100 ಅಭ್ಯರ್ಥಿಗಳ ಸರಾಸರಿ ಆಸ್ತಿ 1.22 ಕೋಟಿ ರೂ. ಮತ್ತು ಕಾಂಗ್ರೆಸ್‌ನ 142 ಅಭ್ಯರ್ಥಿಗಳ ಸರಾಸರಿ ಆಸ್ತಿ 1.04 ಕೋಟಿ ರೂ. ಎಂದು ವರದಿ ವಿವರಿಸಿದೆ.

