ಲಕ್ನೋ ನಗರದಲ್ಲಿ ಬುಧವಾರ ಒಂದೇ ದಿನ ಸುಮಾರು 1200 ರಿಂದ 1500 ಮದುವೆಗಳು ಅದ್ಧೂರಿಯಾಗಿ ಜರುಗಿದವು. ಆದರೆ ಮದುವೆ ಮನೆಯ ಸಂಭ್ರಮದ ನಡುವೆ ಅಡುಗೆ ತಯಾರಕರಿಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವ ದೊಡ್ಡ ತಲೆನೋವಾಗಿ ಪರಿಣಮಿಸಿತು. ಮಾರುಕಟ್ಟೆಯಲ್ಲಿ ಸಿಲಿಂಡರ್ ಸಿಗದೆ ಪರದಾಡಿದ ಕ್ಯಾಟರರ್ಸ್ ಕೊನೆಗೆ ಸಾಂಪ್ರದಾಯಿಕ ಕಟ್ಟಿಗೆ ಒಲೆಗಳ ಮೊರೆ ಹೋಗುವ ಮೂಲಕ ಅತಿಥಿಗಳಿಗೆ ಸಕಾಲಕ್ಕೆ ಊಟ ಉಣಬಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಪ್ಪು ಮಾರುಕಟ್ಟೆಯಲ್ಲೂ ಸಿಗದ ಸಿಲಿಂಡರ್
ಈ ಕುರಿತು ಮಾಹಿತಿ ನೀಡಿರುವ ಟೆಂಟ್ ಕ್ಯಾಟರರ್ಸ್ ಮತ್ತು ಡೆಕೋರೇಷನ್ ವೆಲ್ಫೇರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ವಿಜಯ್ ಕುಮಾರ್ ಅವರು ಮಂಗಳವಾರದವರೆಗೆ ಕಪ್ಪು ಮಾರುಕಟ್ಟೆಯಲ್ಲಿ ಕೆಲವು ಸಿಲಿಂಡರ್‌ಗಳು ಲಭ್ಯವಿದ್ದವು. ಆದರೆ ಬುಧವಾರದ ವೇಳೆಗೆ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಅಡುಗೆಯ ಅವಶ್ಯಕತೆಯನ್ನು ಪೂರೈಸಲು ಅನಿವಾರ್ಯವಾಗಿ ಕಟ್ಟಿಗೆಯನ್ನು ಬಳಸಬೇಕಾಯಿತು. ಕೆಲವು ಅಡುಗೆಗಳನ್ನು ಉಳಿದಿರುವ ಗ್ಯಾಸ್ ಬಳಸಿ ಮಾಡಿದರೆ ಇನ್ನುಳಿದ ಪದಾರ್ಥಗಳನ್ನು ಕಟ್ಟಿಗೆ ಒಲೆಯ ಮೇಲೆ ತಯಾರಿಸುವ ಹೈಬ್ರಿಡ್ ಪದ್ಧತಿಯನ್ನು ಅನುಸರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿದ ಬೆಲೆ ಮತ್ತು ಪರ್ಯಾಯ ಮಾರ್ಗ
ಕ್ಯಾಟರರ್ ಮಹೇಶ್ ಕುಮಾರ್ ಶರ್ಮಾ ಅವರ ಪ್ರಕಾರ ಸೋಮವಾರದವರೆಗೆ 1850 ರೂಪಾಯಿ ಇದ್ದ ಸಿಲಿಂಡರ್ ಬೆಲೆ ಮಂಗಳವಾರ 3500 ರಿಂದ 4000 ರೂಪಾಯಿಗೆ ಏರಿಕೆಯಾಗಿತ್ತು. ಬುಧವಾರವಂತೂ ಹಣ ನೀಡಿದರೂ ಸಿಲಿಂಡರ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮದುವೆ ಸಮಾರಂಭಗಳಿಗೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಮನೆಯ ಬಳಕೆಯ ಸಿಲಿಂಡರ್‌ಗಳು ಸೀಮೆಎಣ್ಣೆ ಒಲೆ ಮತ್ತು ಕಟ್ಟಿಗೆಯನ್ನು ಬಳಸಿ ಅಡುಗೆ ಮಾಡಲಾಗಿದೆ. ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮಾರ್ಚ್ 18 ರವರೆಗೆ ಸಾಲು ಸಾಲು ಮದುವೆ ಕಾರ್ಯಕ್ರಮಗಳಿರುವುದರಿಂದ ದೊಡ್ಡ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಲೈವ್ ಸ್ಟಾಲ್‌ಗಳಲ್ಲಿ ಚೌಮಿನ್ ಮತ್ತು ಇತರ ತಿಂಡಿಗಳನ್ನು ತಯಾರಿಸಲು 5 ಕೆಜಿಯ ಸಣ್ಣ ಸಿಲಿಂಡರ್‌ಗಳನ್ನು ಬಳಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಶೀಘ್ರವೇ ಬಗೆಹರಿಯದಿದ್ದರೆ ಮುಂಬರುವ ಮದುವೆಯ ಸೀಸನ್‌ನಲ್ಲಿ ಅಡುಗೆ ತಯಾರಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ.

