ಬೆಂಗಳೂರು: ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ(Visually Impaired) ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಡಿಜಿಟಲ್ ರೂಪದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ(Visually Impaired) ವಿದ್ಯಾರ್ಥಿಗಳಿಗೆ ಸಿ.ಬಿ.ಎಸ್.ಇ ಮಂಡಳಿಯಲ್ಲಿ ಕಂಪ್ಯೂಟರ್‌ಗಳನ್ನು ಬಳಸಿ 12ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯಲು ಅವಕಾಶವಿದ್ದು, ಅದೇ ರೀತಿ ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ (Visually Impaired) ವಿದ್ಯಾರ್ಥಿಗಳಿಗೆ 2025-26ನೇ ಸಾಲಿನಿಂದ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ವಿದ್ಯಾರ್ಥಿಗಳಿರುವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರು ಪರೀಕ್ಷಾ ಪೂರ್ವ ಹಾಗೂ ಪರೀಕ್ಷಾ ದಿನಗಳಂದು ಕೆಳಕಂಡಂತೆ ಕ್ರಮವಹಿಸಲು ತಿಳಿಸಿದೆ.
1. ಪರೀಕ್ಷಾ ಕೇಂದ್ರದಲ್ಲಿ ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ(Visually Impaired) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾಡುವುದು.
2. ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ ಕಾಲೇಜುಗಳಲ್ಲಿ(Visually Impaired) ವಿದ್ಯಾರ್ಥಿಗಳಿರುವ ಕಾರ್ಯನಿರ್ವಹಿಸುವ ವಿಶೇಷ ಉಪನ್ಯಾಸಕರನ್ನು ಕೊಠಡಿ ಮೇಲ್ವಿಚಾರಕರಾಗಿ ನೇಮಿಸಿಕೊಳ್ಳುವುದು.
3. ಪರೀಕ್ಷೆಯ ದಿನದಂದು ಸದರಿ ವಿಷಯವನ್ನು ಬೋಧಿಸುವ ಉಪನ್ಯಾಸಕರನ್ನು ಕೊಠಡಿ ಮೇಲ್ವಿಚಾರಕರಾಗಿ ನೇಮಿಸಬಾರದು ಮತ್ತು ಅವರು ವಿದ್ಯಾರ್ಥಿಯ ಕಾಲೇಜಿನ ಉಪನ್ಯಾಸಕರಾಗಿರಬಾರದು.
4. ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ (Visually Impaired) ವಿದ್ಯಾರ್ಥಿಗಳು ಉತ್ತರಗಳನ್ನು ಬರೆಯಲು ಕಂಪ್ಯೂಟರ್‌ಗಳನ್ನು ಬಳಸಲು ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಇವರ ಪೂರ್ವಾನುಮತಿಯನ್ನು ಪಡೆಯಬೇಕು.
5. ಉತ್ತರಗಳನ್ನು ಟೈಪ್ ಮಾಡಲು ಮಾತ್ರ ಕಂಪ್ಯೂಟರ್ ಬಳಕೆ ಸೀಮಿತವಾಗಿರುತ್ತದೆ.
6. ಸಂಬಂಧಪಟ್ಟ ವಿದ್ಯಾರ್ಥಿಯು ತನ್ನ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅನ್ನು ತರುವುದು.
7. ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಅನ್ನು ಸರಿಯಾಗಿ format ಮಾಡಿ ಪರೀಕ್ಷಾ ಕೇಂದ್ರಕ್ಕೆ ತರಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಅಂತಹ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಅನ್ನು ಕಂಪ್ಯೂಟರ್ ಜ್ಞಾನವುಳ್ಳ ಉಪನ್ಯಾಸಕರಿಂದ ತಪಾಸಣೆ ಮಾಡಿಸಿ ಸರಿಯಾಗಿ format ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಅಂತಹ ವಿದ್ಯಾರ್ಥಿಗೆ ತನ್ನ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅನ್ನು ಬಳಸಲು ಅನುಮತಿಸಬೇಕು.
8. ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಯು ತಂದಿರುವ ಕಂಪ್ಯೂಟರ್ /ಲ್ಯಾಪ್‌ಟಾಪ್ ಯಾವುದೇ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
9. ಕಂಪ್ಯೂಟರ್/ ಲ್ಯಾಪ್‌ಟಾಪ್‌ನಲ್ಲಿ ವಿದ್ಯಾರ್ಥಿಯು ಉತ್ತರವನ್ನು ಟೈಪ್ ಮಾಡಲು software- Windows 10/11 software, MS Office software, Multilingua! Nudi 6.5 software, Math cad software e Ỏ NAB (National Association for the Blind) ರವರಿಂದ ಅನುಮೋದಿತ ಯಾವುದೇ software ನ್ನು ಮಾತ್ರ ಅಳವಡಿಸಿಕೊಂಡಿರಬೇಕು.
10. ವಿದ್ಯಾರ್ಥಿಯು ಕಂಪ್ಯೂಟರ್/ ಲ್ಯಾಪ್ ಟಾಪ್ ಅನ್ನು ಅನುಮತಿ ಪಡೆದುಕೊಂಡ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು.
11. ಕಂಪ್ಯೂಟರ್ ಬಳಕೆಯ ಜವಾಬ್ದಾರಿಯು ಆಯಾ ವಿದ್ಯಾರ್ಥಿಯದ್ದಾಗಿರುತ್ತದೆ ಮತ್ತು ಈ ವಿಷಯದಲ್ಲಿ ಮಂಡಳಿಯಾಗಲಿ/ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾಗಲಿ ಜವಾಬ್ದಾರರಾಗಿರುವುದಿಲ್ಲ.
12. ಗಣಕ ಯಂತ್ರದ ಬಳಕೆಯ ಕಾರಣದಿಂದಾಗಿ ಯಾವುದೇ ತಪ್ಪುಗಳು/ತಾಂತ್ರಿಕ ದೋಷಗಳು ಸಂಭವಿಸಿದಲ್ಲಿ ಅದರಿಂದ ಉಂಟಾಗುವ ಪರಿಣಾಮಗಳಿಗೆ ವಿದ್ಯಾರ್ಥಿಗಳೇ ನೇರ ಜವಾಬ್ದಾರರಾಗಿರುತ್ತಾರೆ. ಈ ವಿಷಯದಲ್ಲಿ ಮಂಡಲಿ/ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಪಾತ್ರವೇನೂ ಇರುವುದಿಲ್ಲ.
13. ಪರೀಕ್ಷೆ ಪ್ರಾರಂಭವಾಗುವುದಕ್ಕೆ ಒಂದು ಗಂಟೆಯ ಮುಂಚಿತವಾಗಿ ವಿದ್ಯಾರ್ಥಿ ತನ್ನ ಕಂಪ್ಯೂಟರ್ / ಲ್ಯಾಪ್‌ಟಾಪ್‌ನಲ್ಲಿ ಟೈಪ್ ಮಾಡಿರುವುದನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು sample ಗಾಗಿ printout ತೆಗೆದು ಪರಿಶೀಲಿಸಿಕೊಳ್ಳಬೇಕು.
14. ಕೊಠಡಿ ಮೇಲ್ವಿಚಾರಕರು ನೀಡಿದ ಪ್ರಶ್ನೆ ಪತ್ರಿಕೆಯಿಂದ Reader cum scribe ಅವರು ಪ್ರಶ್ನೆಯನ್ನು ಓದುವುದು ಮತ್ತು ಪರೀಕ್ಷಾರ್ಥಿಯು ಅದನ್ನು ಕೇಳಿಸಿಕೊಂಡು ಉತ್ತರವನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಬೇಕು.
15. ಒಂದು ವೇಳೆ ಪರೀಕ್ಷಾ ಸಮಯದಲ್ಲಿ ಕಂಪ್ಯೂಟರ್‌ನಲ್ಲಿ ಯಾವುದೇ ತೊಂದರೆಯುಂಟಾಗಿ ಪರೀಕ್ಷಾರ್ಥಿಗೆ ಟೈಪ್ ಮಾಡಲು ಸಾಧ್ಯವಾಗದಿದ್ದಾಗ, Reader cum scribe ಪರೀಕ್ಷಾರ್ಥಿಯು ಹೇಳುವ ಉತ್ತರಗಳನ್ನು ಬರೆಯಬಹುದಾಗಿದೆ. ಇದಕ್ಕೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಅವಕಾಶ ಕಲ್ಪಿಸಿಕೊಡಬಹುದಾಗಿದೆ.
16. ಪರೀಕ್ಷಾ ಸಮಯದಲ್ಲಿ, ಸಮಯದ ನಷ್ಟ ಸಂಭವಿಸಿದ್ದಲ್ಲಿ ಅಂತಹ ಸಮಯದ ನಷ್ಟವನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ದಿನಚರಿಯಲ್ಲಿ ದಾಖಲಿಸುವುದು.
17. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯು ಟೈಪ್ ಮಾಡಿರುವ ಉತ್ತರಗಳ printout ತೆಗೆಯಲು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು printer ನ ವ್ಯವಸ್ಥೆ ಮಾಡಿಕೊಂಡಿರಬೇಕು.
18. A4 size Printer with all Windows 10/11 OS drivers and compatible with windows 10/11 OS ಅಳವಡಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.
19. ಪರೀಕ್ಷೆಯ ಕೊನೆಯಲ್ಲಿ, ವಿದ್ಯಾರ್ಥಿಯು ಟೈಪ್ ಮಾಡಿರುವ ಉತ್ತರಗಳನ್ನು ಪುಟ ಸಂಖ್ಯೆಯನ್ನು ಹೊಂದಿರುವಂತೆ ಸರಳ ಕಾಗದದ ಮೇಲೆ ಮುದ್ರಿಸಿ, ಕೊನೆಯ ಪುಟದಲ್ಲಿ ಕೇಂದ್ರದ ಮುಖ್ಯ ಅಧೀಕ್ಷಕರು ಮುದ್ರೆ (seal) ಮತ್ತು ಸಹಿಯನ್ನು ನಮೂದಿಸುವುದು.
20. ವಿದ್ಯಾರ್ಥಿಗೆ ಮಂಡಲಿಯಿಂದ ಒದಗಿಸಲಾಗಿರುವ ಉತ್ತರ ಪತ್ರಿಕೆಯ Facing sheet ನಲ್ಲಿನ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು. ಕೊಠಡಿ ಮೇಲ್ವಿಚಾರಕರು ಭರ್ತಿ ಮಾಡಿದ ವಿವರಗಳನ್ನು ಪರಿಶೀಲಿಸಿ ಸಹಿ ಮಾಡಬೇಕು.
21. ಕೊಠಡಿ ಮೇಲ್ವಿಚಾರಕರು ಉತ್ತರ ಪುಸ್ತಕದ ಮುಖಪುಟದ ನಂತರದ ಪುಟದಲ್ಲಿ ಈ ವಿದ್ಯಾರ್ಥಿಯು ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ (Visually Impaired) ವಿದ್ಯಾರ್ಥಿ ಎಂಬುದನ್ನೂ ತನ್ನ ಉತ್ತರಗಳನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಿದ್ದಾನೆ/ ಮಾಡಿದ್ದಾಳೆ ಮತ್ತು ಪ್ರಿಂಟ್ ಔಟ್‌ಗಳನ್ನು ತೆಗೆದು ಉತ್ತರ ಪುಸ್ತಕಕ್ಕೆ ಲಗತ್ತಿಸಲಾಗಿದೆ ಎಂಬುದನ್ನು ನಮೂದಿಸಬೇಕು ಅದಕ್ಕೆ ಕೇಂದ್ರದ ಮುಖ್ಯ ಅಧೀಕ್ಷಕರು ಮುದ್ರೆ (seal) ಮತ್ತು ಸಹಿಯನ್ನು ನಮೂದಿಸುವುದು. ಮುಖ ಪುಟದ ಉಳಿದ ಎಲ್ಲಾ ಪುಟಗಳಲ್ಲಿ ಅಡ್ಡಗೆರೆ ಎಳೆಯಬೇಕು.
22. ಉತ್ತರಗಳನ್ನು ಮುದ್ರಿಸಿದ ವುಟಗಳಲ್ಲಿ ಕಾಲೇಜು/ ಕೇಂದ್ರ/ವಿದ್ಯಾರ್ಥಿಗಳ ವಿವರಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
23. ಮೇಲೆ ತಿಳಿಸಿದಂತೆ ಮುದ್ರಿಸಲಾದ ಪುಟಗಳನ್ನು ವಿದ್ಯಾರ್ಥಿಗೆ ಒದಗಿಸಲಾಗಿರುವ ಉತ್ತರ ಪತ್ರಿಕೆಯೊಂದಿಗೆ, ಪೂರಕ ಹಾಳೆಗಳನ್ನು ಮುಖ್ಯ ಉತ್ತರ ಪತ್ರಿಕೆಗೆ ಲಗತ್ತಿಸುವ ರೀತಿಯಲ್ಲಿ ಸುರಕ್ಷಿತವಾಗಿ ಕಟ್ಟಬೇಕು. ತದನಂತರ ಮುಖ್ಯ ಉತ್ತರ ಪತ್ರಿಕೆ ಮತ್ತು ಮುದ್ರಿಸಲಾದ ಪುಟಗಳನ್ನು ಸೇರಿಸಿ ಮಂಡಲಿಯಿಂದ ಒದಗಿಸಲಾಗುವ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗೆ ಅಳವಡಿಸುವ ಹಸಿರು ಸ್ಟಿಕ್ಕರ್ ಅನ್ನು ಅಂಟಿಸಿ ಭದ್ರಪಡಿಸುವುದು.
ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ದೃಷ್ಟಿದೋಷವುಳ್ಳ/ದೃಷ್ಟಿಮಾಂದ್ಯ (Visually Impaired) ವಿದ್ಯಾರ್ಥಿಗಳ ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು.




