ಮೈಸೂರು : ಕಾಂಗ್ರೆಸ್ ಪಕ್ಷ ಎಂದರೆ ಅದು ಅಹಿಂದ. ಅದನ್ನು ಅರಿಯದೆ ಅಹಿಂದ ಸಮಾವೇಶ ಮಾಡಿ ಕಾಂಗ್ರೆಸ್ ಪಕ್ಷವನ್ನು ಮುಚ್ಚಲು ಹೊರಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಎಂದರೆ ಏನು ಎಂದೇ ತಿಳಿದುಕೊಂಡಿಲ್ಲ. ಕಾಂಗ್ರೆಸ್ ಏ ಅಹಿಂದ. ಇವರೇನು ಅಹಿಂದ ಸಮಾವೇಶ ಮಾಡೋದು. ಕಾಂಗ್ರೆಸ್ ಪಕ್ಷಕ್ಕೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಹಿರಿಯ ನಾಯಕರು ಸೊಲ್ಲೆತ್ತುತ್ತಿಲ್ಲ ಎಂದು ಛೇಡಿಸಿದರು.
ಡಿ.ಕೆ.ಶಿವಕುಮಾರ್ ಅವರು ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ , ಪಕ್ಷವನ್ನು ಕಟ್ಟಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು. ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂಬಂತಾಗಬಾರದು ಎಂದು ಹೇಳಿದರು.
ಇನ್ನೂ ಅರಮನೆ ಉಳಿಸುವ ಸಂಬಂಧ ಮಾತನಾಡಿದ ಅವರು, ಅರಮನೆ ಉಳಿಸುವ ಸಂಬಂಧ ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ ಮಂತ್ರಿಗಳು ಸಭೆ ಕರೆಯಬೇಕು. ಅರಮನೆ ಬಗ್ಗೆ ಆಸಕ್ತಿ ಹೊಂದಿರುವ ತಜ್ಞರು, ಪತ್ರಕರ್ತರನ್ನು ಒಳಗೊಂಡಂತೆ ಸಭೆನಡೆಯಬೇಕು. ಅರಮನೆ ನಿರ್ವಹಣೆಯ ರೂಪುರೇಷೆಗಳು ಅಲ್ಲಿ ಚರ್ಚೆಯಾಗಬೇಕು ಎಂದರು.
ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ನಿವೃತ್ತಿ ಹೊಂದುತ್ತಿದ್ದಾರೆ. ಆದರೆ ಅವರನ್ನು ಮೂರು ವರ್ಷಗಳ ಕಾಲ ಮುಂದುವರೆಸಲು ಹುನ್ನಾರ ನಡೆಯುತ್ತಿದೆ. ಇದಾಗಬಾರದು ಎಂದಿದ್ದಾರೆ.

