ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಅದೇ ಮೊದಲ ಬಾರಿಗೆ ಕಪ್ ಎತ್ತಿಹಿಡಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷವೂ ಸಹ ಟ್ರೋಫಿ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ ಎನಿಸಿಕೊಂಡು ಅಬ್ಬರಿಸಿದೆ.
17 ವರ್ಷಗಳ ಕಾಲ ಟ್ರೋಫಿ ಇಲ್ಲದೇ ಹೀನಾಯವಾಗಿ ಟ್ರೋಲ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀಗೆ ಸತತ ಎರಡು ಬಾರಿ ಟ್ರೋಫಿ ಗೆದ್ದಿರುವುದು ತಂಡದ ಅಭಿಮಾನಿಗಳು ಹಾಗೂ ಫ್ರಾಂಚೈಸಿ ಪಾಲಿಗೆ ಸಂತಸ ತಂದಿದೆ.
ಅದರಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಹೆಚ್ಚು ಸಂತಸವಾಗಿದ್ದು, ತಮ್ಮ ನೆಚ್ಚಿನ ಆಟಗಾರನನ್ನು ಕಪ್ ಗೆಲ್ಲಲಾಗದವ ಎಂದು ಮಾಡಿದ್ದ ಟ್ರೋಲ್ಗೆ ಕೌಂಟರ್ ಕೊಡುವಂತಹ ಪೋಸ್ಟ್ ಹಾಕಿಕೊಂಡು ಖುಷಿ ಹೊರಹಾಕಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಸಹ ಈ ಬಾರಿ ಟ್ರೋಫಿ ಗೆದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಂತಸಪಟ್ಟಿದ್ದಾರೆ. ನಿನ್ನೆ ( ಜೂನ್ 9 ) ಸಹ ಆರ್ಸಿಬಿ ಎರಡನೇ ಟ್ರೋಫಿ ಗೆದ್ದದ್ದರ ಬಗ್ಗೆ ವಿಡಿಯೊವೊಂದನ್ನು ಕೊಹ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಆರ್ಸಿಬಿಯನ್ನು ಮನೆ ಎಂದು ಕರೆದಿರುವ ಕೊಹ್ಲಿ ಈ ಬಾರಿಯ ಆವೃತ್ತಿಯನ್ನು ನಂಬಿಕೆಯೊಂದಿಗೆ ಆರಂಭಿಸಿ ಕೊನೆಗೆ ಸತತ ಎರಡು ಟ್ರೋಫಿ ಗೆಲ್ಲುವುದರ ಜೊತೆ ಅಂತ್ಯ ಮಾಡಿದ್ದೇವೆ, ಆರ್ಸಿಬಿ ಎಮೋಷನ್ನಿಂದ ಬದುಕುವ ತಂಡವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆದ್ದ ಸಂಭ್ರಮಾಚರಣೆಯನ್ನು ಎರಡು ವಾರ ಕಳೆದರೂ ಮುಂದುವರಿಸಿದ್ದಾರೆ.
ಇದೇ ಸಮಯದಲ್ಲಿ ಇದೇ ಕೊಹ್ಲಿ ನಾನು ಯಾವತ್ತಿಗೂ ಟ್ರೋಫಿ ಗೆಲ್ಲುವುದರ ಬಗ್ಗೆ ಪೋಸ್ಟ್ ಹಾಕುವ ವ್ಯಕ್ತಿ ಅಲ್ಲ ಎಂದಿದ್ದ ವಿಡಿಯೊ ವೈರಲ್ ಆಗಿದ್ದು, ಕೊಹ್ಲಿಯ ಎರಡೆರಡು ಮನಸ್ಥಿತಿ ಹೊರಬಿದ್ದಿದೆ.
ಹೌದು, ಕಳೆದ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿ ಕಪ್ ಗೆದ್ದಿತ್ತು. ಈ ಸಂದರ್ಭದಲ್ಲಿ ಕೊಹ್ಲಿ ಟ್ರೋಫಿ ಗೆದ್ದದ್ದರ ಕುರಿತು ಒಂದೇ ಒಂದು ಪೋಸ್ಟ್ ಹಾಕಿರಲಿಲ್ಲ. ಈ ಬಗ್ಗೆ ಪ್ರಶ್ನೆ ಎದುರಾದಾಗಲೂ ಮಾತನಾಡಿದ್ದ ಕೊಹ್ಲಿ ನನಗೆ ಕಪ್ ಗೆದ್ದದ್ದನ್ನು ಪೋಸ್ಟ್ ಮಾಡಿಕೊಳ್ಳುವುದು ಇಷ್ಟವಾಗಲ್ಲ ಎಂದಿದ್ದರು. ಅಲ್ಲದೇ ಚಾಂಪಿಯನ್ಸ್ ಟ್ರೋಫಿ ಗೆದ್ದೆವು, ಅದನ್ನು ಪೋಸ್ಟ್ ಹಾಕಿಬಿಟ್ರೆ ಎರಡು ಕಪ್ ಸಿಕ್ಕಿಬಿಡುತ್ತಾ ಎಂದು ವ್ಯಂಗ್ಯವಾಡಿದ್ದರು.
ಹೀಗೆ ಡೈಲಾಗ್ ಬಿಟ್ಟಿದ್ದ ಕೊಹ್ಲಿ ಇಂದು ಆರ್ಸಿಬಿ ಟ್ರೋಫಿ ಗೆದ್ದಿದ್ದನ್ನು ಒಂದಲ್ಲ ಎರಡಲ್ಲ ಮೂರು ಬಾರಿ ಪೋಸ್ಟ್ ಹಾಕಿಕೊಂಡಿದ್ದಾರೆ. ಅನೇಕ ನೆಟ್ಟಿಗರು ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಕೊಹ್ಲಿಯದ್ದು ಡಬಲ್ ಗೇಮ್ ಎಂದಿದ್ದಾರೆ.

