ಮುಂಬೈನ ಥಾಣೆ (ಪಶ್ಚಿಮ) ಯಲ್ಲಿ ಶಾಲಾ ಮಕ್ಕಳು ಮಹೀಂದ್ರಾ ಎಕ್ಸ್‌ಯುವಿ 700 ಕಾರನ್ನು ಚಾಲನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋದಲ್ಲಿ, ಶಾಲಾ ಮಕ್ಕಳು ಹಿಂಬದಿಯ ಸೀಟಿನಲ್ಲಿ ಮತ್ತು ಚಾಲಕನ ಸೀಟಿನಲ್ಲಿ ಮತ್ತೊಬ್ಬ ಕುಳಿತಿದ್ದಾರೆ. ಜನನಿಬಿಡ ಬೀದಿಗಳ ಮಧ್ಯದಲ್ಲಿ ಶಾಲಾ ಮಕ್ಕಳು ಕಾರನ್ನು ಚಾಲನೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ, ನೆಟಿಜನ್‌ಗಳು ರಸ್ತೆ ಸುರಕ್ಷತೆ ಮತ್ತು ಪೋಷಕರ ಮೇಲ್ವಿಚಾರಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ವಿಡಿಯೋವನ್ನು 2025ರ ಮಾರ್ಚ್ 12 ರಂದು ಸೇಫ್‌ಕಾರ್ಸ್_ಇಂಡಿಯಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನಾನು ಚಾಲನೆ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಿದ್ದೇನೆ, ಶಾಲಾ ವಿದ್ಯಾರ್ಥಿಗಳು 8 ಅಥವಾ 9 ನೇ ತರಗತಿಯಲ್ಲಿರಬಹುದು (ಸುಮಾರು 12-13 ವರ್ಷ ವಯಸ್ಸಿನವರು). ಕೆಲವರು ಸನ್‌ರೂಫ್‌ನಿಂದ ಹೊರಗೆ ನೋಡುತ್ತಿದ್ದರು. ಅವರ ಸುರಕ್ಷತೆಗಾಗಿ ನಾನು ಅವರನ್ನು ಗದರಿಸಿದೆ. ಕಾರಿನಲ್ಲಿ ಸುಮಾರು 5-6 ವಿದ್ಯಾರ್ಥಿಗಳಿದ್ದರು. ಇದಕ್ಕೆ ಪೋಷಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ಇದು ಕಾರಿನೊಳಗಿನ ಮಕ್ಕಳು ಮತ್ತು ಸುತ್ತಮುತ್ತಲಿನ ಪಾದಚಾರಿಗಳಿಗೆ, ವಿಶೇಷವಾಗಿ ಆ ಪ್ರದೇಶದಲ್ಲಿ ನಡೆದುಕೊಂಡು ಹೋಗುವ ಮತ್ತು ರಸ್ತೆ ದಾಟುವ ಶಾಲಾ ಮಕ್ಕಳಿಗೆ ಅತ್ಯಂತ ಅಪಾಯಕಾರಿಯಾಗಿದೆ” ಎಂದು ವಿಡಿಯೋದಲ್ಲಿ ಬರೆಯಲಾಗಿದೆ.