ನವದೆಹಲಿ: ʼಯುವಶಕ್ತಿ ಭಾರತದ ಪ್ರಬಲ ಶಕ್ತಿ, ಹಳ್ಳಿಗಳೇ ರಾಷ್ಟ್ರದ ಜೀವಾಳʼ ಎಂದೇ ನಂಬಿರುವ ಪ್ರಧಾನಿ ನರೇಂದ್ರ ಮೋದಿ ಇಂದು “ವಿಕಸಿತ್ ವೈಬ್ರಂಟ್ ವಿಲೇಜ್-2026” ವಿಶಿಷ್ಠ ಕಾರ್ಯಕ್ರಮ ಮೂಲಕ ಯುವಜನರೊಂದಿಗೆ ನೇರ ಸಂವಾದ ನಡೆಸಿದರು.
ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವ ಆಯ್ದ 400ಕ್ಕೂ ಹೆಚ್ಚು ಯುವ ಜನರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ದೇಶಾದ್ಯಂತ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಸಿ, ಇದರಲ್ಲಿ ಪಾಲ್ಗೊಂಡಿದ್ದ 3 ಲಕ್ಷಕ್ಕೂ ಅಧಿಕ ಯುವಜನರ ಪೈಕಿ ಅಂತಿಮವಾಗಿ 400 ಅರ್ಹ ವಿದ್ಯಾರ್ಥಿ-ಯುವಜನರನ್ನು ಆಯ್ಕೆ ಮಾಡಲಾಗಿತ್ತು.
ಜೂನ್ 4ರಿಂದ ಜೂನ್ 30ರವರೆಗೆ ʼವಿಕಸಿತ್ ವೈಬ್ರಂಟ್ ವಿಲೇಜ್ ಪ್ರೋಗ್ರಾಂ-2026ʼ ಆಯೋಜಿಸಿ ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 74 ವೈಬ್ರಂಟ್ ಗಡಿ ಗ್ರಾಮಗಳನ್ನು ಸಂಪರ್ಕಿಸುವ ಅರ್ಹ ಯುವಕರನ್ನು ಆಯ್ಕೆ ಮಾಡಲಾಗಿತ್ತು. ಭಾರತದ ಗಡಿ ಪ್ರದೇಶಗಳ ಸಾಮಾಜಿಕ-ಆರ್ಥಿಕ, ಭೂದೃಶ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಅಭಿವೃದ್ಧಿ ಆಕಾಂಕ್ಷೆಗಳಿಗೆ ನೇರವಾಗಿ ಸ್ಪಂದಿಸುವ ದಿಸೆಯಲ್ಲಿ ಇದೊಂದು ವಿಶಿಷ್ಠ ಹೆಗ್ಗುರುತು.
ಇಂದು ಸಂಜೆ 4.30ಕ್ಕೆ ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ʼವಿಕಸಿತ್ ವೈಬ್ರಂಟ್ ವಿಲೇಜ್-2026ʼ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವ ಜನತೆಯೊಂದಿಗೆ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ಜೂನ್ 4ರಿಂದ 30ರವರೆಗೆ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಪ್ರಧಾನಿ ಮೋದಿಯವರೊಂದಿಗೆ ಹಂಚಿಕೊಂಡರು.
ಈ ಕಾರ್ಯಕ್ರಮವು ಸಮುದಾಯದ ಭಾಗವಹಿಸುವಿಕೆ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ರಾಷ್ಟ್ರೀಯ ಏಕೀಕರಣ, ಗಡಿ ಗ್ರಾಮಗಳ ಕಾರ್ಯತಂತ್ರದ ಪ್ರಾಮುಖ್ಯತೆಗೆ ನಿದರ್ಶನವಾಗಿದೆ.
ಗಡಿ ಗ್ರಾಮಗಳನ್ನು ರಾಷ್ಟ್ರದ ಮೊದಲ ಗ್ರಾಮಗಳಾಗಿ ಪರಿಗಣಿಸುವ ಮತ್ತು ವಿಕಸಿತ್ ಭಾರತದತ್ತ ಸಾಗುವ ಪ್ರಯಾಣದಲ್ಲಿ ಸಕ್ರಿಯವಾಗಿಸುವ ಪ್ರಧಾನಿ ದೃಷ್ಟಿಕೋನವನ್ನು ಸಾಕಾರಗೊಳಿಸಲು ʼಮೈ ಭಾರತ್ʼ ಮೂಲಕ ಜಾರಿಗೆ ತರಲಾದ “ವಿಕಸಿತ್ ವೈಬ್ರಂಟ್ ವಿಲೇಜ್ʼ ಕಾರ್ಯಕ್ರಮ ವಿಶಿಷ್ಠವಾಗಿದೆ.

