ವಿಜಯಪುರ: ಇತ್ತೀಚಿನ ದಿನಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿವೆ. ವಿಜಯಪುರದ ಹೋಟೆಲ್ ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ವ್ಯಾಪಿಸಿದೆ.
ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಹೋಟೆಲ್ ಕೃಷ್ಣ ಪ್ಯಾಲೇಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆರಂಭದಲ್ಲಿ ಕೃಷ್ಣ ಪ್ಯಾಲೇಸ್ ಮುಂಭಾಗ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಸುತ್ತಮುತ್ತಲು ವ್ಯಾಪಿಸಿದೆ. ಹೋಟೆಲ್ ಮುಂಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ತಡರಾತ್ರಿ ಈ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗ್ಯಾಸ್ ಲೀಕ್ ಆಗಿ ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

