ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳ ಮೃತದೇಹಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಹೊರಬಿದ್ದಿವೆ. ಪ್ರಾಥಮಿಕ ತನಿಖೆಯ ಪ್ರಕಾರ ಕೌಟುಂಬಿಕ ಕಲಹವೇ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಮೃತರನ್ನು ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ ಅಲಿಯಾಸ್ ತಿಪ್ಪರಾಯ (10), ವಿಕಾಸ (5) ಹಾಗೂ ಸಾನಿಕಾ (7) ಎಂದು ಗುರುತಿಸಲಾಗಿದೆ. ಆಗಸ್ಟ್ 23ರ ರಾತ್ರಿ ಶೋಭಾ ಹಾಗೂ ಅವರ ಪತಿ ಮಲಕಾರಿ ಜಾಲಗೇರಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಮರುದಿನ ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ದೇವರ ಪೂಜೆಗೆ ನೈವೇದ್ಯ ಸಿದ್ಧಪಡಿಸುವುದು ಹಾಗೂ ಕೂಲಿ ಕೆಲಸಕ್ಕೆ ತೆರಳಲು ಬುತ್ತಿ ಮಾಡಿಕೊಡುವ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ನಡೆದಿತ್ತು ಎಂದು ತಿಳಿದುಬಂದಿದೆ.
ಗಲಾಟೆಯ ಬಳಿಕ ಶೋಭಾ ಮಕ್ಕಳೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದರು. ಪತ್ನಿ ಮತ್ತು ಮಕ್ಕಳಿಗಾಗಿ ಮಲಕಾರಿ ಗ್ರಾಮ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆಯಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇದೇ ವೇಳೆ ಭೂತನಾಳ ಕೆರೆಯಲ್ಲಿ ಆರು ಮಂದಿಯ ಮೃತದೇಹಗಳು ಪತ್ತೆಯಾಗಿವೆ.
ಇನ್ನು ಶೋಭಾ ಅವರ ಕುಟುಂಬಸ್ಥರು ಪತಿ ಮಲಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮದ್ಯಪಾನ ಮಾಡಿ ಶೋಭಾ ಮೇಲೆ ಹಲ್ಲೆ ನಡೆಸುತ್ತಿದ್ದ ಹಾಗೂ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಗಳು ತನಿಖೆಯ ಭಾಗವಾಗಿದ್ದು, ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಿಎಲ್‌ಡಿಇ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಪೂರ್ಣ ತನಿಖೆ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ.

