ಬೆಂಗಳೂರು: ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಲ್ಲಿ ನಟ ಧನ್ವೀರ್ ವಿರುದ್ಧ ದರ್ಶನ್ ಪಿಎ ನಾಗರಾಅಜ್ ಎಂಬುವವರು ದೂರು ದಾಖಲಿಸಿದ್ದ ಬೆನ್ನಲ್ಲೇ ಇದೀದ ಧನ್ವೀರ್ ತಂದೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ದೂರು ದಾಖಲಿಸಿದ್ದಾರೆ.
ನಟ ಧನ್ವೀರ್ ಅವರ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಮತ್ತು ಅವರ ತಂಡದ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮನೆಗೆ ನುಗ್ಗಿ ಗಲಾಟೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯಲಕ್ಷ್ಮೀ ವಿರುದ್ಧ ದೂರು ನೀಡಿದ್ದಾರೆ. ಅವರು ನೀಡಿರುವ ಅರ್ಜಿಯ ಮೇರೆಗೆ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
ಅಕ್ಟೋಬರ್ 21ರಂದು ರಾತ್ರಿ ಸುಮಾರು 8:30ರ ಸಮಯದಲ್ಲಿ ಧನ್ವೀರ್ ಮೈಸೂರಿಗೆ ತೆರಳಿದ್ದರು. ಆ ವೇಳೆ ಮನೆಯಲ್ಲಿ ನಾನು, ನನ್ನ ಪತ್ನಿ ಭಾರತಿ, ತಾಯಿ ಜಯಮ್ಮ ಹಾಗೂ ಮಗಳು ನಳಿನಾಕ್ಷಿ ಇದ್ದರು. ಆ ಸಂದರ್ಭದಲ್ಲಿ ಮನೆಗೆ ಬಂದ ವಿಜಯಲಕ್ಷ್ಮಿ ಹಾಗೂ ಅವರ ಮ್ಯಾನೇಜರ್ ನಾಗರಾಜ್ ಕಾಲಿಂಗ್ ಬೆಲ್ ಬಾರಿಸಿದ್ದಾರೆ. ಬಾಗಿಲು ತೆರೆದಾಗ “ಧನ್ವೀರ್ ಎಲ್ಲಿ, ಅಪ್ಪ ಎಲ್ಲೆ?” ಎಂದು ಕೇಳಿದ್ದು, “ಧನ್ವೀರ್ ಊರಲ್ಲಿಲ್ಲ, ಅವರ ತಂದೆ ಊಟ ಮಾಡುತ್ತಿದ್ದಾರೆ” ಎಂದು ಮನೆಯವರು ತಿಳಿಸಿದ್ದಾರೆ.
ಆ ಸಮಯದಲ್ಲಿ ಮನೆಯಲ್ಲಿದ್ದ ಸಂಬಂಧಿ ಅಜಯ್ ಗೌಡ ಅವರನ್ನು ಕಂಡು ರೌಡಿ ಎಂದು ತಪ್ಪಾಗಿ ಭಾವಿಸಿದ ಮ್ಯಾನೇಜರ್ ನಾಗರಾಜ್, “ನೀವು ರೌಡಿಗಳನ್ನು ಕರೆಸಿದ್ದೀರಾ, ನಾನು ಈಗ ನೋಡಿ ರೌಡಿಗಳನ್ನು ಹೇಗೆ ಕರೆಸುತ್ತೇನೆ” ಎಂದು ಕೂಗಾಡಿದ್ದಾರೆ. ಬಳಿಕ ವಿಜಯಲಕ್ಷ್ಮಿ ಅವರು ಗೌರವ್ ಶೆಟ್ಟಿ ಎಂಬುವವರಿಗೆ ಕರೆ ಮಾಡಿ “ಬೋಜಣ್ಣ ಮತ್ತು ಬಾಟಲಿ ಪ್ರಮೋದ್ನನ್ನು ಕಳಿಸು” ಎಂದು ಹೇಳಿದ್ದಾರೆ. ನಾಗರಾಜ್ ಸಹ ಫೋನ್ ಮಾಡಿ ಅವರನ್ನು ಬರಹೇಳಿದ್ದು, ಕೆಲವೇ ನಿಮಿಷಗಳಲ್ಲಿ ಬೋಜ ಹಾಗೂ ಬಾಟಲಿ ಪ್ರಮೋದ್ ಧನ್ವೀರ್ ಅವರ ಮನೆಗೆ ಬಂದಿದ್ದಾರೆ.
ಮನೆಗೆ ಬಂದ ವ್ಯಕ್ತಿಗಳನ್ನು “ನೀವು ಯಾರು, ನಮ್ಮ ಮನೆಗೆ ಹೇಗೆ ಬಂದ್ರಿ?” ಎಂದು ಕೇಳಿದ್ದಕ್ಕೆ, ಬಾಟಲಿ ಪ್ರಮೋದ್ “ನಾನು ವಿಜಯಲಕ್ಷ್ಮಿ ತಮ್ಮ” ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, “ಧನ್ವೀರ್ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕೋ ನಮಗೆ ಗೊತ್ತಿದೆ” ಎಂದು ಜೋರು ಧ್ವನಿಯಲ್ಲಿ ಬೆದರಿಕೆ ಹಾಕಿದ್ದಾರೆ. ಈ ವೇಳೆ “ನಾನು ಪೊಲೀಸರಿಗೆ ಕರೆ ಮಾಡುತ್ತೇನೆ” ಎಂದು ನಾನು ಹೇಳಿದ ತಕ್ಷಣವೇ ಎಲ್ಲರೂ ಒಂದೇ ಕಾರಿನಲ್ಲಿ ಕೂಗಾಡಿಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಮ್ಮೇಗೌಡ ಉಲ್ಲೇಖಿಸಿದ್ದಾರೆ.
ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ ಹಾಕಿರುವ ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್, ಬೋಜ ಹಾಗೂ ಬಾಟಲಿ ಪ್ರಮೋದ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಧನ್ವೀರ್ ತಂದೆ ಮನವಿ ಮಾಡಿದ್ದಾರೆ.
ನಟ ಧನ್ವೀರ್ ವಿರುದ್ಧ ದೂರು ದಾಖಲು: ದರ್ಶನ್ ಪಿಎಯಿಂದ ಕಂಪ್ಲೇಂಟ್ ಫೈಲ್
ಬೆಂಗಳೂರು: ನಟ ದರ್ಶನ್ ಆಪ್ತ, ಧನ್ವೀರ್ ವಿರುದ್ಧ ದೂರು ದಾಅಖಲಾಗಿದೆ. ನಟ ದರ್ಶನ್ ಅವರ ಆಪ್ತ ಸಹಾಯಕ ನಾಗರಾಜ್ ಎಂಬುವವರು ಧನ್ವೀರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಧ್ವನ್ವೀರ್ ವಿರುದ್ಧ ದೂರು ದಾಖಲಾಗಿದೆ. ನಾಗರಾಜ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಧನ್ವೀರ್ ವಿರುದ್ಧ ಎನ್ಸಿಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ನಾಗರಾಜ್ ನೀಡಿರುವ ದೂರಿನ ಆಧಾರದ ಮೇಲೆ ಆರ್.ಆರ್. ನಗರ ಪೊಲೀಸರು ಪ್ರಕರಣದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ನಟ ಧನ್ವೀರ್ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

