ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸೆ.10ಕ್ಕೆ ನೂರು ದಿನಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ವಿಧಾನಸೌಧ,ಮೈಸೂರು ಅರಮನೆ,ಕೃಷ್ಣರಾಜಸಾಗರ ಆಣೆಕಟ್ಟು , ತುಂಗಭದ್ರಾ ಜಲಾಶಯ,ಆಲಮಟ್ಟಿ ಜಲಾಶಯ ಸೇರಿದಂತೆ ರಾಜ್ಯದ ಹನ್ನೊಂದು ಪ್ರಮುಖ ಪಾರಂಪರಿಕ ಕಟ್ಟಡಗಳಿಗೆ ಸೆ.10 ರಿಂದ ನಾಲ್ಕು ದಿನಗಳ ಕಾಲ ವರ್ಣರಂಜಿತ ವಿದ್ಯುತ್ ದೀಪಾಲಂಕಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾಗುತ್ತಿದೆ.
ಬೆಂಗಳೂರಿನ ಪುರಭವನ,ಕೆ.ಆರ್.ಪುರಂ ತೂಗುಸೇತುವೆ,ಮೈಸೂರು ಅರಮನೆ ಹಾಗೂ ಜಯಮಾರ್ತಾಂಡ ಮಹಾದ್ವಾರ,ಐತಿಹಾಸಿಕ ಹಂಪಿಯ ವಿಶ್ವವಿಖ್ಯಾತ ವಿರೂಪಾಕ್ಷೇಶ್ವರ ದೇವಾಲಯದ ಬಿಷ್ಟಪ್ಪಯ್ಯನ ಗೋಪುರ,ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿ,ಜಗತ್ ಸರ್ಕಲ್ ಸೇರಿದಂತೆ ಪ್ರಮುಖ ಸ್ಥಳಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿವೆ. ಸರ್ಕಾರದ ಅಭಿವೃದ್ಧಿ ಯೋಜನೆ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಯಶೋಗಾಥೆಯನ್ನು ಬಿಂಬಿಸುವ ಮನಮೋಹಕ ಎಲ್‌ಇಡಿ ಪ್ರದರ್ಶನಗಳು ,ಧ್ವನಿ ಮತ್ತು ಬೆಳಕು ,ತ್ರಿ ಡಿ ಮ್ಯಾಪಿಂಗ್ ಪ್ರದರ್ಶನಗಳ ಆಯ್ದ ಕಟ್ಟಡಗಳ ಮೇಲೆ ಬಿತ್ತರಗೊಳ್ಳಲಿವೆ.
ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಡಳಿತ ವತಿಯಿಂದಲೂ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ.ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೇರಿ ನೂರು ದಿನಗಳ ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್,ಸಾರ್ವಜನಿಕರ ಕುಂದು ಕೊರತೆ ,ಅಹವಾಲು ಆಲಿಸಿ,ಪರಿಹರಿಸಲು “ಪ್ರಜಾಸೇವಾ” ಇಲಾಖೆ ಸ್ಥಾಪನೆ,ಗ್ಯಾರಂಟಿ ಯೋಜನೆಗಳಡಿ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ,ರೌಡಿಗಳ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ರಚನೆ,ಕೇಂದ್ರದ ನೀತಿ ಆಯೋಗದ ಸಭೆಯಲ್ಲಿ ಕರ್ನಾಟಕದ ಬೇಡಿಗಳ ಪ್ರಬಲ ಮಂಡನೆ,ನೂತನ ಸಿಎಸ್‌ಆರ್ ನೀತಿ ಕ್ರಮ,ಬರಪರಿಸ್ಥಿತಿ ನಿರ್ವಹಣೆಗೆ ವಿಭಾಗವಾರು ಪರಿಶೀಲನೆ ನಡೆಸಿ ಅಗತ್ಯ ಸಿದ್ಧತೆ ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿಶೇಷ ಒತ್ತು, ಕೊಪ್ಪಳ, ರಾಯಚೂರು, ವಿಜಯನಗರ ,ಬಳ್ಳಾರಿ ಹಾಗೂ ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ರೈತರ ಜೀವನಾಡಿಯಾಗಿರುವ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಹೊಸ ಸ್ಪಿಲ್ ವೇ ಗೇಟುಗಳ ಉದ್ಘಾಟನೆ, ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ,72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ.
ಮುಖ್ಯಮಂತ್ರಿಗಳು ಮುಂಬರುವ ದಿನಗಳಲ್ಲಿ ದೃಢ ಕರ್ನಾಟಕದ ಸಂಕಲ್ಪಕ್ಕೆ ಮಹತ್ವದ ಹೆಜ್ಜೆಗಳನ್ನು ಇಡಲು ಆಲೋಚಿಸಿದ್ದಾರೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ವೃತ್ತಿಪರ ಪದವಿ ಮತ್ತು ಸ್ನಾತಕೊತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಪ.ಜಾತಿ / ಪ.ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ವೆಬ್ ಸೈಟ್ https://shp.karnataka.gov.in/bcwd ನಲ್ಲಿ ಸೆಪ್ಟೆಂಬರ್ 30 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್ ಸೈಟ್ https://bcwd.karnataka.gov.in ಅನ್ನು ನೋಡಬಹುದು.ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ [email protected] ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ ಅಧಿಕಾರಿಗಳ ಕಚೇರಿ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ, 1ನೇ ಮಹಡಿ, ಪೋಡಿಯಂ ಬ್ಲಾಕ್, ವಿವಿ ಟವರ್, ಅಂಬೇಡ್ಕರ್ ವೀದಿ ಬೆಂಗಳೂರು-01 ಇವರನ್ನು ಅಗತ್ಯ ದಾಖಲೆಗಳೊಂದಿಗೆ ಇಲ್ಲಿ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-22867628 ಅನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿವಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

