ಬೆಂಗಳೂರು: ಕರ್ನಾಟಕ ವಿಧಾನಸಭೆ ಈವರೆಗೂ ಕಂಡು ಕೇಳರಿಯದ ಘಟನೆಗೆ ಸಾಕ್ಷಿಯಾಗಿದೆ. ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ಸಚಿವರ ವಿರುದ್ಧ ತೀವ್ರ ಅಸಮಾಧಾನಗೊಂಡ ಸ್ಪೀಕರ್ ಯು.ಟಿ.ಖಾದರ್ ಸರ್ಕಾರದ ವಿರುದ್ಧವೂ ಗರಂ ಆಗಿ ಕಲಾಪ ನಡೆಸದೇ ಪೀಠದಿಂದ ಎದ್ದು ಹೋಗಿದ್ದರು. ಇದರ ಬೆನ್ನಲ್ಲೇ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ 8 ಹಿರಿಯ ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಸದನದಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಸಚಿವರು ಸೂಕ್ತ ಉತ್ತರ ಕೊಡುತ್ತಿಲ್ಲ ಎಂದು ಸಿಟ್ಟಾದ ಸ್ಪೀಕರ್ ಯು.ಟಿ.ಖಾದರ್ ಸಭಾತ್ಯಾಗ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಘಟನೆ ಮಾರ್ಚ್ 16ರಂದು ವಿಧಾನಸಭೆಯಲ್ಲಿ ನಡೆದಿತ್ತು. ಬಜೆಟ್ ಕಲಾಪದ 7 ನೇ ದಿನದಂದು ಸಚಿವರು, ಅಧಿಕಾರಿಗಳು ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಅನುಪಸ್ಥಿತರಿದ್ದರು. ಇದಕ್ಕೆ ಕೋಪಗೊಂಡ ಸ್ಪೀಕರ್ ಪೀಠದಿಂದ ಹೊರಹೋದರು. ಇದರ ಬೆನ್ನಲ್ಲೇ ಸ್ಪೀಕರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಕಾರಣ ಕೇಳಿ ಬರೋಬ್ಬರಿ ಎಂಟು ಇಲಾಖೆಯ ಹಿರಿಯ ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಸ್ಪೀಕರ್ ಅಸಮಧಾನಗೊಂಡು ಎದ್ದು ಹೋಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬೇಸರಗೊಂಡಿದ್ದು, ಅಧಿವೇಶನದಲ್ಲಿ ಶಾಸಕರುಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡದ ಇಲಾಖೆ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು 8 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ- ಆರ್. ವಿನೋತ್ ಪ್ರಿಯಾ
ವಸತಿ ಇಲಾಖೆ ಕಾರ್ಯದರ್ಶಿ- ಮೋಹನ್ ರಾಜ್ ಕೆ.ಪಿ
ಸಾರಿಗೆ ಇಲಾಖೆ ಕಾರ್ಯದರ್ಶಿ-ಎನ್.ವಿ ಪ್ರಸಾದ್
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ- ಆರ್.ಗೀರಿಶ್
ಲೋಕಪಯೋಗಿ ಇಲಾಖೆ ಕಾರ್ಯದರ್ಶಿ-ಅಮಲಾನ್ ಆದಿತ್ಯ ಬಿಸ್ವಾಸ್
ಕಂದಾಯ ಇಲಾಖೆ-ರಾಜೇಂದರ್ ಕುಮಾರ್ ಕಟಾರಿಯಾ
ಸರ್ಕಾರಕ್ಕೆ ತೀವ್ರ ಮುಜುಗರ, ಶಾಸಕರ ಹಕ್ಕು, ಸದನದ ಘನತೆಗೆ ಚ್ಯುತಿಯುಂಟು ಮಾಡಿರುತ್ತದೆ. ಸದನದಲ್ಲಿ ಪಶ್ನೆಗಳಿಗೆ ಏಕೆ ಉತ್ತರ ನೀಡಿಲ್ಲ? ಉತ್ತರಿಸದ ಬಗ್ಗೆ ಲಿಖಿತ ಸಮಜಾಯಿಸಿ ನೀಡುವಂತೆ ಸೂಚನೆ ನೀಡಲಾಗಿದೆ. ಇಂದೇ ವಿಧಾನಸಭೆ ಕಾರ್ಯದರ್ಶಿಗೆ ಉತ್ತರ ಒದಗಿಸಬೇಕು. ಉತ್ತರ ಒದಗಿಸಿದೆ ಇದ್ದರೆ ಶಾಸಕರಿಗೆ ಸಚಿವರ ಮೂಲಕ ವಿಳಂಬಕ್ಕೆ ಕಾರಣ ನೀಡಿ ಎಂದು ನೋಟಿಸ್ ಜಾರಿ ಮಾಡಲಾಗಿದೆ.
ಇನ್ನು ವಿಧಾನಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆಗಿ ಸದನ ಮುಂದೂಡಿದ್ದಲ್ಲದೆ ಪೀಠದಿಂದಲೇ ಎದ್ದು ಹೊರ ನಡೆದ ಯು.ಟಿ. ಖಾದರ್ ಅವರನ್ನು ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ಮನವೊಲಿಸಿದ್ದಾರೆ. ಸ್ಪೀಕರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ.

