HomeKarnatakaರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಮೊದಲ ಎರಡು ಚರಣ ಮಾತ್ರ ಹಾಡಲು ಸರ್ಕಾರ ಆದೇಶ

ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಮೊದಲ ಎರಡು ಚರಣ ಮಾತ್ರ ಹಾಡಲು ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಲ್ಲಿ ‘ವಂದೇ ಮಾತರಂ’ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಸರ್ಕಾರ ಸೂಚಿಸಿದೆ.

ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜಕೀಯ) ಅಧೀನ ಕಾರ್ಯದರ್ಶಿ ಸಂದೀಪ್ ಬಿ.ಕೆ. ಅವರು 2026ರ ಸೆಪ್ಟೆಂಬರ್ 8ರಂದು ಸರ್ಕಾರದ ಆದೇಶ ಹೊರಡಿಸಿದ್ದಾರೆ.

ಭಾರತದ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಜನರಲ್ಲಿ ರಾಷ್ಟ್ರೀಯತೆ, ಏಕತೆ ಹಾಗೂ ದೇಶಭಕ್ತಿಯ ಭಾವನೆ ಮೂಡಿಸುವಲ್ಲಿ ‘ವಂದೇ ಮಾತರಂ’ ಗೀತೆಯು ಮಹತ್ವದ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗೀತೆಯ ಗಾಯನ ಅಥವಾ ವಾಚನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿಯೂ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಮಾರಂಭಗಳ ಸ್ವರೂಪ ಮತ್ತು ಸಂದರ್ಭಕ್ಕೆ ಅನುಗುಣವಾಗಿ ‘ವಂದೇ ಮಾತರಂ’ ಗೀತೆಯ ವಾಚನ/ಗಾಯನದಲ್ಲಿ ಏಕರೂಪತೆ, ಗೌರವ ಹಾಗೂ ಸೂಕ್ತ ಶಿಷ್ಟಾಚಾರ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಷ್ಟ್ರದ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಿಗೆ ವಿನಾಯಿತಿ

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಇತರೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಆದೇಶವನ್ನು ಸಚಿವ ಸಂಪುಟದ ತೀರ್ಮಾನದ ಹಿನ್ನೆಲೆಯಲ್ಲಿ ಹೊರಡಿಸಲಾಗಿದ್ದು, ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಜಾರಿಗೊಳಿಸಲಾಗಿದೆ.

*ಡಿಕೆ ಸರ್ಕಾರಕ್ಕೆ ಶತದಿನಗಳ ಸಂಭ್ರಮ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸೆ.10ಕ್ಕೆ ನೂರು ದಿನಗಳ ಸಂಭ್ರಮ.ಈ ಹಿನ್ನೆಲೆಯಲ್ಲಿ ವಿಧಾನಸೌಧ, ಮೈಸೂರು ಅರಮನೆ, ಕೃಷ್ಣರಾಜಸಾಗರ ಆಣೆಕಟ್ಟು, ತುಂಗಭದ್ರಾ ಜಲಾಶಯ, ಆಲಮಟ್ಟಿ ಜಲಾಶಯ ಸೇರಿದಂತೆ ರಾಜ್ಯದ ಹನ್ನೊಂದು ಪ್ರಮುಖ ಪಾರಂಪರಿಕ ಕಟ್ಟಡಗಳಿಗೆ ಸೆ.10 ರಿಂದ ನಾಲ್ಕು ದಿನಗಳ ಕಾಲ ವರ್ಣರಂಜಿತ ವಿದ್ಯುತ್ ದೀಪಾಲಂಕಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾಗುತ್ತಿದೆ.

ಬೆಂಗಳೂರಿನ ಪುರಭವನ, ಕೆ.ಆರ್.ಪುರಂ‌ ತೂಗುಸೇತುವೆ, ಮೈಸೂರು ಅರಮನೆ ಹಾಗೂ ಜಯಮಾರ್ತಾಂಡ ಮಹಾದ್ವಾರ, ಐತಿಹಾಸಿಕ ಹಂಪಿಯ ವಿಶ್ವವಿಖ್ಯಾತ ವಿರೂಪಾಕ್ಷೇಶ್ವರ ದೇವಾಲಯದ ಬಿಷ್ಟಪ್ಪಯ್ಯನ ಗೋಪುರ, ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿ, ಜಗತ್ ಸರ್ಕಲ್ ಸೇರಿದಂತೆ ಪ್ರಮುಖ ಸ್ಥಳಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿವೆ. ಸರ್ಕಾರದ ಅಭಿವೃದ್ಧಿ ಯೋಜನೆ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಯಶೋಗಾಥೆಯನ್ನು ಬಿಂಬಿಸುವ ಮನಮೋಹಕ ಎಲ್‌ಇಡಿ ಪ್ರದರ್ಶನಗಳು ,ಧ್ವನಿ ಮತ್ತು ಬೆಳಕು ,ತ್ರಿ ಡಿ ಮ್ಯಾಪಿಂಗ್ ಪ್ರದರ್ಶನಗಳ ಆಯ್ದ ಕಟ್ಟಡಗಳ ಮೇಲೆ ಬಿತ್ತರಗೊಳ್ಳಲಿವೆ. ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಡಳಿತ ವತಿಯಿಂದಲೂ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ.

ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೇರಿ ನೂರು ದಿನಗಳ ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸಾರ್ವಜನಿಕರ ಕುಂದು ಕೊರತೆ, ಅಹವಾಲು ಆಲಿಸಿ, ಪರಿಹರಿಸಲು “ಪ್ರಜಾಸೇವಾ” ಇಲಾಖೆ ಸ್ಥಾಪನೆ, ಗ್ಯಾರಂಟಿ ಯೋಜನೆಗಳಡಿ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ, ರೌಡಿಗಳ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ರಚನೆ, ಕೇಂದ್ರದ ನೀತಿ ಆಯೋಗದ ಸಭೆಯಲ್ಲಿ ಕರ್ನಾಟಕದ ಬೇಡಿಗಳ ಪ್ರಬಲ ಮಂಡನೆ, ನೂತನ ಸಿಎಸ್‌ಆರ್ ನೀತಿ ಕ್ರಮ, ಬರಪರಿಸ್ಥಿತಿ ನಿರ್ವಹಣೆಗೆ ವಿಭಾಗವಾರು ಪರಿಶೀಲನೆ ನಡೆಸಿ ಅಗತ್ಯ ಸಿದ್ಧತೆ ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿಶೇಷ ಒತ್ತು, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಹಾಗೂ ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ರೈತರ ಜೀವನಾಡಿಯಾಗಿರುವ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಹೊಸ ಸ್ಪಿಲ್ ವೇ ಗೇಟುಗಳ ಉದ್ಘಾಟನೆ, ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು, 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕ್ರಮ ಸೇರಿದಂತೆ ಅನೇಕ ಕಾರ್ಯದರ್ಶಿಗಳನ್ನು ಅನುಷ್ಠಾನಗೊಳಿಸಿದ್ದಾರೆ.

ಮುಖ್ಯಮಂತ್ರಿಗಳು ಮುಂಬರುವ ದಿನಗಳಲ್ಲಿ ದೃಢ ಕರ್ನಾಟಕದ ಸಂಕಲ್ಪಕ್ಕೆ ಮಹತ್ವದ ಹೆಜ್ಜೆಗಳನ್ನು ಇಡಲು ಆಲೋಚಿಸಿದ್ದಾರೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಎಂ.ಎನ್‌.ಅನುಚೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

📄 Official Documents / Supporting Documents

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular