HomeIndiaBig Update: ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಗಣನೆ

Big Update: ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಗಣನೆ

ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಹೌದು ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಭಾರೀ ಬೇಡಿಕೆ ಇದೆ. ಕೇಂದ್ರ ಸರ್ಕಾರ ದೂರದ ನಗರಗಳನ್ನು ಸಂಪರ್ಕಿಸಲು ವಂದೇ ಭಾರತ್ ಸ್ಲೀಪರ್ ರೈಲುಗಳ ಘೋ‍ಷಣೆಯನ್ನು ಮಾಡಿತ್ತು.

ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ಸಂಚಾರದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಾಯೋಗಿಕ ಸಂಚಾರವನ್ನು ನಡೆಸಿದ್ದಾರೆ. ಗಂಟೆಗೆ 180 ಕಿ.ಮೀ. ವೇಗದಲ್ಲಿ ರೈಲನ್ನು ಓಡಿಸಿ ಈ ಪರಿಶೀಲನೆ ಪೂರ್ಣಗೊಳಿಸಲಾಗಿದೆ.

ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ರಾಜಸ್ಥಾನ ರಾಜ್ಯದ ಕೋಟಾ-ಮಧ್ಯಪ್ರದೇಶದ ನಾಗ್ಡಾ ಸೆಕ್ಷನ್‌ನಲ್ಲಿ ಈ ಪ್ರಾಯೋಗಿಕ ಪರೀಕ್ಷೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀರು ತುಂಬಿದ ಗಾಜಿನ ಲೋಟವನ್ನು ರೈಲಿನೊಳಗೆ ಇಟ್ಟು ಗಂಟೆಗೆ 180 ಕಿ.ಮೀ. ವೇಗದಲ್ಲಿ ರೈಲನ್ನು ಓಡಿಸುವ ಮೂಲಕ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ. ಈ ವಾಟರ್ ಟೆಸ್ಟ್‌ ವೇಳೆ ರೈಲು ವೇಗವಾಗಿ ಸಾಗುವಾಗಲೂ ಒಂದು ಹನಿ ನೀರು ಸಹ ಹೊರಗೆ ಚೆಲ್ಲದೇ ಇರುವುದು ರೈಲಿನ ತಂತ್ರಜ್ಞಾನ, ವಿನ್ಯಾಸ ಮತ್ತು ಹಳಿಯ ವ್ಯವಸ್ಥೆ ಹೇಗಿದೆ? ಎಂದು ತಿಳಿಸಿದೆ.

ಸಚಿವರು ಎಕ್ಸ್‌ ಖಾತೆಯಲ್ಲಿ ರೈಲು ವೇಗವಾಗಿ ಸಾಗುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ‘ವಂದೇ ಭಾರತ್ ಸ್ಲೀಪರ್ ರೈಲನ್ನು ಇಂದು ರೈಲ್ವೆ ಸುರಕ್ಷತಾ ಆಯುಕ್ತರು ಪರೀಕ್ಷಿಸಿದರು. ಇದು ಕೋಟಾ ಮತ್ತು ನಾಗ್ಡಾ ವಿಭಾಗಗಳ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿತು. ಇದಲ್ಲದೆ, ನಮ್ಮದೇ ಆದ ವಾಟರ್ ಟೆಸ್ಟ್ (ನೀರಿನ ಪರೀಕ್ಷೆ) ಈ ಹೊಸ ತಲೆಮಾರಿನ ರೈಲಿನ ತಾಂತ್ರಿಕ ವೈಶಿಷ್ಟ್ಯಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿತು’ ಎಂದು ಹೇಳಿದ್ದಾರೆ.

2024ರ ಸೆಪ್ಟೆಂಬರ್‌ನಲ್ಲಿ ಭಾರತೀಯ ರೈಲ್ವೆ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಬೋಗಿಯನ್ನು ಅನಾವರಣಗೊಳಿಸಿತ್ತು. 2025ರಲ್ಲಿ ರೈಲುಗಳು ಸಂಚಾರ ಆರಂಭಿಸಲಿದೆ ಎಂದು ಹೇಳಿತ್ತು. ಆದರೆ ಕೆಲವು ತಾಂತ್ರಿಕ ಕಾರಣಕ್ಕೆ ಈ ವರ್ಷ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭಿಸಿಲ್ಲ.

ಯಾವುದೇ ರೈಲು ಸಂಚಾರ ಆರಂಭಕ್ಕೂ ಮುನ್ನ ರೈಲ್ವೆ ಸುರಕ್ಷತಾ ಆಯುಕ್ತರ ಪ್ರಮಾಣ ಪತ್ರ ಅಗತ್ಯವಾಗಿದೆ. ರೈಲು ಓಡಿಸಲು ಪಡೆಯುವ ಕೊನೆಯ ಪ್ರಮಾಣ ಪತ್ರವಿದು. ಈಗ ವಂದೇ ಭಾರತ್ ಸ್ಲೀಪರ್ ಬೋಗಿಯನ್ನು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ್ದು, ವಾಣಿಜ್ಯ ಸಂಚಾರಕ್ಕೆ ಶೀಘ್ರವೇ ಒಪ್ಪಿಗೆ ಸಿಗಲಿದೆ.

ಬೆಂಗಳೂರಿನಲ್ಲಿ ಬೋಗಿ ತಯಾರಿ: ಸಚಿವ ಅಶ್ವಿನಿ ವೈಷ್ಣವ್ 2024ರಲ್ಲಿ ಬೆಂಗಳೂರಿನ ಬಿಇಎಂಎಲ್ ರೈಲ್ವೆ ಸಂಕೀರ್ಣದಲ್ಲಿ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ವಿನ್ಯಾಸವನ್ನು ಅನಾವರಣ ಮಾಡಿದ್ದರು. ಭಾರತದ ಪ್ರಮುಖ ರೈಲ್ವೆ ಮತ್ತು ಮೆಟ್ರೋ ತಯಾರಿಕಾ ಸಂಸ್ಥೆಯಾದ ಬಿಇಎಂಎಲ್ ಈ ರೈಲನ್ನು ಸಂಪೂರ್ಣವಾಗಿ ದೇಶೀಯವಾಗಿ ವಿನ್ಯಾಸಗೊಳಿಸಿ ತಯಾರಿಸಿದೆ.

ಈ ರೈಲನ್ನು ಮೊದಲು ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಓಡಿಸಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿತ್ತು. ಬಳಿಕ ಚೆನ್ನೈನ ರೈಲ್ವೆ ಕೋಚ್ ಫ್ಯಾಕ್ಟರಿ ರೈಲಿನ ವಿನ್ಯಾಸದಲ್ಲಿ ಕೆಲವು ಬದಲಾವಣೆ ಸೂಚಿಸಿತ್ತು.

ಆದ್ದರಿಂದ ಪುನಃ ಬೆಂಗಳೂರಿಗೆ ತಂದು ವಿನ್ಯಾಸ ಬದಲಿಸಲಾಗಿತ್ತು. ಈಗ ರೈಲ್ವೆ ಸುರಕ್ಷತಾ ಆಯುಕ್ತರು ರೈಲನ್ನು ಪುನಃ ಪರಿಶೀಲನೆ ನಡೆಸಿದ್ದಾರೆ. ಯಾವಾಗ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭವಾಗಲಿದೆ? ಎಂಬುದು ಇನ್ನೂ ಸಹ ಅಂತಿಮವಾಗಿಲ್ಲ.

ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಜನರಿಗೆ ವಿಶ್ವದರ್ಜೆಯ ಪ್ರಯಾಣದ ಅನುಭವ ಮತ್ತು ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲಿದೆ. ರೈಲುಗಳಲ್ಲಿ ಪ್ರಯಾಣಿಕರ ಅನುಭವವನ್ನು ಸುಧಾರಿಸುವುದು ಮಾತ್ರವಲ್ಲದೆ, ದೀರ್ಘಕಾಲದವರೆಗೆ ನಿಂತು ಸೇವೆ ಸಲ್ಲಿಸುವ ಸಿಬ್ಬಂದಿ ಮತ್ತು ಲೋಕೋ ಪೈಲಟ್‌ಗಳ (ಚಾಲಕರ) ಸೌಕರ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸಲಾಗಿದೆ.

 ಸೇವಾ ಸಿಬ್ಬಂದಿಗೆ ವಿಶೇಷ ಸೌಲಭ್ಯಗಳು ಹಾಗೂ ಚಾಲಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕ್ಯಾಬಿನ್‌ಗಳು ಮತ್ತು ಶೌಚಾಲಯಗಳು ಇದರ ಭಾಗವಾಗಿವೆ. ಹೊಸ ವೈಶಿಷ್ಟ್ಯಗಳೊಂದಿಗೆ ಹವಾನಿಯಂತ್ರಣ ವ್ಯವಸ್ಥೆ, ತಾಪಮಾನ ನಿಯಂತ್ರಣ, ಆಮ್ಲಜನಕದ ಮಟ್ಟವನ್ನು ಕಾಯ್ದುಕೊಳ್ಳುವ ವ್ಯವಸ್ಥೆ, ಹೊಸ ವಿನ್ಯಾಸದ ಶೌಚಾಲಯಗಳು, ಉತ್ತಮ ಗುಣಮಟ್ಟದ ಆಸನಗಳು ಮತ್ತು ವಿಶ್ವದರ್ಜೆಯ ಸುರಕ್ಷತಾ ಕ್ರಮಗಳಂತಹ ಸೌಲಭ್ಯಗಳನ್ನು ರೈಲು ಹೊಂದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular