ಬೆಂಗಳೂರು- ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪ್ರಾಸ್ಯುಕೇಶನ್ ( ಅಭಿಯೋಜನೆಗೆ) ಒಳಪಡಿಸಲು ಬಿ ನಾಗೇಂದ್ರ ವಿರುದ್ಧ ಅಭಿಪ್ರಾಯ ಹೇಳಿರುವ ಬೆನ್ನಲ್ಲೇ ರಾಜ್ಯಪಾಲರು ಇಬ್ಬರು ಮಾಜಿ
ಸಚಿವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಬಿ. ನಾಗೇಂದ್ರ ಅವರ ಜತೆಗೆ ಜನಾರ್ದನ ರೆಡ್ಡಿ ಹಾಗೂ ಎಂ.ಪಿ. ರೇಣುಕಾಚಾರ್ಯ ಅವರ ವಿರುದ್ಧದ ಪ್ರಕರಣಗಳ ಬಗ್ಗೆಯೂ ಸಂಪುಟದ ಅಭಿಪ್ರಾಯವನ್ನು ಕೋರಲಾಗಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ – ಕಾನೂನು ಕ್ರಮಕ್ಕೆ) ಅನುಮತಿ ಕೋರಿ ಜಾರಿ ನಿರ್ದೇಶನಾಲಯವು (ED) ರಾಜ್ಯಪಾಲರಿಗೆ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ರಾಜ್ಯಪಾಲರು ಈ ಕುರಿತು ಸಚಿವ ಸಂಪುಟದ ಅಧಿಕೃತ ಅಭಿಪ್ರಾಯವನ್ನು ಕೋರಿದ್ದಾರೆ.
ರಾಜ್ಯಪಾಲರ ಈ ನಿರ್ಧಾರಕ್ಕೆ ರಾಜ್ಯ ಸರ್ಕಾರ ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ ತಿರುಗೇಟು ನೀಡಲು ಸಜ್ಜಾಗುತ್ತಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಇತರ ನಾಯಕರ ಬಾಕಿ ಉಳಿದಿರುವ ಪ್ರಾಸಿಕ್ಯೂಷನ್ ಅರ್ಜಿಗಳ ಮಾಹಿತಿಯನ್ನೂ ಒದಗಿಸುವಂತೆ ಅಥವಾ ಸಮಾನ ಮಾನದಂಡ ಅನುಸರಿಸುವಂತೆ ಸರ್ಕಾರದ ವತಿಯಿಂದ ಪ್ರತ್ಯೇಕ ನಿಲುವು ತಾಳುವ ಗಂಭೀರ ಚಿಂತನೆ ನಡೆದಿದ್ದು, ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ.
ಸರ್ಕಾರ–ರಾಜ್ಯಪಾಲರ ನಡುವೆ ಮತ್ತೊಂದು ಸುತ್ತಿನ ಸಂಘರ್ಷ?
ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ವಿಚಾರದಲ್ಲಿ ಸಚಿವ ಸಂಪುಟದ ಅಭಿಪ್ರಾಯ ಕೇಳಿರುವುದು ಕೇವಲ ಕಾನೂನು ಪ್ರಕ್ರಿಯೆಯ ಬೆಳವಣಿಗೆಯಾಗಿ ಉಳಿಯದೆ, ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಬಂಧದ ಹಿನ್ನೆಲೆಯಲ್ಲಿ ಕೂಡ ಗಮನ ಸೆಳೆದಿದೆ.
ಈ ಹಿಂದೆ ರಾಜ್ಯಪಾಲರ ಕಚೇರಿಗೆ ಬಂದಿರುವ ಪ್ರಾಸಿಕ್ಯೂಷನ್ ಮನವಿಗಳು ಹಾಗೂ ವಿವಿಧ ಪ್ರಕರಣಗಳ ಬಗ್ಗೆ ಸರ್ಕಾರ ಮತ್ತು ರಾಜಭವನದ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೀಗ ನಾಗೇಂದ್ರ ಪ್ರಕರಣದ ಜೊತೆಗೆ ಇತರ ನಾಯಕರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನೂ ಸರ್ಕಾರ ಪ್ರಸ್ತಾಪಿಸಲು ಮುಂದಾದರೆ, ವಿಚಾರ ರಾಜಕೀಯ ಸಂಘರ್ಷದ ಸ್ವರೂಪ ಪಡೆಯುವ ಸಾಧ್ಯತೆಯಿದೆ.
ಸದ್ಯ ರಾಜ್ಯಪಾಲರು ಕೇಳಿರುವ ಅಭಿಪ್ರಾಯಕ್ಕೆ ಸಚಿವ ಸಂಪುಟ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರದ ಅಭಿಪ್ರಾಯದ ಬಳಿಕ ಪ್ರಾಸಿಕ್ಯೂಷನ್ ಅನುಮತಿ ವಿಚಾರದಲ್ಲಿ ರಾಜ್ಯಪಾಲರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಪ್ರಕರಣದ ಮುಂದಿನ ಪ್ರಮುಖ ಹಂತವಾಗಲಿದೆ.
ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ವಿವಾದಕ್ಕೆ ತೆರೆ ಬಿದ್ದಿಲ್ಲ. ಇದೀಗ ಪ್ರಾಸಿಕ್ಯೂಷನ್ ಅನುಮತಿ ವಿಚಾರ ಮುನ್ನೆಲೆಗೆ ಬಂದಿರುವುದರಿಂದ ಪ್ರಕರಣ ಮತ್ತೆ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿದೆ. ನಾಗೇಂದ್ರ ಜೊತೆಗೆ ಇತರ ರಾಜಕೀಯ ನಾಯಕರ ಪ್ರಕರಣಗಳನ್ನೂ ಸರ್ಕಾರ ಪ್ರಸ್ತಾಪಿಸುವ ಸಾಧ್ಯತೆ ಇರುವುದರಿಂದ, ಮುಂದಿನ ದಿನಗಳಲ್ಲಿ ಕಾನೂನು ಹೋರಾಟದ ಜೊತೆಗೆ ರಾಜಕೀಯ ಸಂಘರ್ಷವೂ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

