ದಾವಣಗೆರೆ ಹರಿಹರ ವೀರಶೈವ ಪಂಚಮಸಾಲಿ ಗುರು ಪೀಠದಲ್ಲಿ ದಿನಕ್ಕೊಂದು ವಿದ್ಯಮಾನಗಳು ನಡೆಯುತ್ತಿದ್ದು, ವಚನಾನಂದ ಶ್ರೀ ಹಾಗೂ ದರ್ಮದರ್ಶಿ ಮಂಡಳಿ ನಡುವಿನ ಜಟಾಪಟಿ ಮುಂದುವರೆದಿದೆ. ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀಗಳನ್ನು ಉಚ್ಚಟನೆ ಮಾಡಿದರೂ ಪೀಠ ಬಿಟ್ಟುಕೊಟ್ಟದೇ ಮಠದಲ್ಲಿಯೇ ವಚಾನಂದ ಶ್ರೀ ವಾಸ್ತವ್ಯ ಹೂಡಿದ್ದಾರೆ.
ಹರಿಹರ ಪಂಚಮಸಾಲಿ ಪೀಠದ ನಿಯಂತ್ರಣಕ್ಕಾಗಿ ವಚನಾನಂದ ಸ್ವಾಮೀಜಿ ಹಾಗೂ ಮಠದ ಟ್ರಸ್ಟಿಗಳು ಪರಸ್ಪರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಚನಾನಂದ ಸ್ವಾಮೀಜಿ ಹರಿಹರ ಜ್ಯೂನಿಯರ್ ಮತ್ತು ಸಿನಿಯರ್ ಹಾಗೂ ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಕೆ ಮಾಡಿದ್ದಾರೆ.
ಇದೇ 13 ರಂದು 12 ಕಾರಣ ಹೇಳಿ ಸ್ವಾಮೀಜಿಗಳನ್ನು ಮಠದ ಟ್ರಸ್ಟಿಗಳು ಉಚ್ಛಾಟನೆ ಮಾಡಿದ್ದರು. ತಮ್ಮನ್ನು ಮಠದಿಂದ ಖಾಲಿ ಮಾಡಿಸುವಂತೆಯೂ ಟ್ರಸ್ಟಿಗಳು ನ್ಯಾಯಾಲಯದ ಮೊರೆ ಹೋಗಬಹುದೆಂದು ತಮ್ಮ ವಿರುದ್ಧ ಯಾರೇ ಪ್ರಕರಣ ದಾಖಲಿಸಿದ್ದರು ಅದನ್ನ ತಮ್ಮ ಗಮನಕ್ಕೆ ತರುವಂತೆ ಶ್ರೀಗಳು ಕೇವಿಯಟ್ ಸಲ್ಲಿಸಿದ್ದಾರೆ.
ಶ್ರೀಗಳ ವಿರುದ್ದ ಕೇವಿಯಟ್: ವಚನಾನಂದ ಸ್ವಾಮೀಜಿ ವಿರುದ್ದ ಮಠದ ಟ್ರಸ್ಟಿಗಳು ಕೂಡ ಕೇವಿಯಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಟ್ರಸ್ಟ್ ಪರವಾಗಿ ಹರಿಹರ, ದಾವಣಗೆರೆ ಹಾಗೂ ಬೆಂಗಳೂರು ಹೈಕೋರ್ಟ್ನಲ್ಲಿ ಕೇವಿಯಟ್ಗೆ ಅರ್ಜಿ ಸಲ್ಲಿಸಲಾಗಿದೆ. ಸ್ವಾಮೀಜಿಗಳು ಯಾವುದೇ ನಿರ್ಧಾರ ತೆಗೆದುಕೊಂಡರೂ ಮಠದ ಟ್ರಸ್ಟಿಗೆ ನೋಟಿಸ್ ನೀಡುವ ಮೂಲಕ ತಿಳಿಸುವಂತೆ ಕೇವಿಯಟ್ ಸಲ್ಲಿಕೆ ಮಾಡಲಾಗಿದೆ.
ಇನ್ನೊಂದೆಡೆ ಯಾವುದೇ ಕಾರಣಕ್ಕು ಮಠ ಬಿಟ್ಟು ಹೋಗುವುದಿಲ್ಲ. ಇದು ನನ್ನ ವಿರುದ್ಧ ನಡೆಸಿರುವ ಷಡ್ಯಂತ್ರ. ಪಂಚಮ ಸಾಲಿ ಟ್ರಸ್ಟ್ ಗೆ ಲೆಕ್ಕ ಕೊಡುವಂತೆ ನಾನು ಕಿಳಿದ್ದಕ್ಕೆ ಟ್ರಸ್ಟ್ ನವರು ನನ್ನ ವಿರುದ್ಧ ವ್ಯವಸ್ಥಿತ ಸಂಚು ನಡೆಸಿ ಉಚ್ಛಾಟನೆ ಮಾಡಿದ್ದಾರೆ. ಕಾನೂನು ಹೋರಾಟ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು. ಅದರಂತೆ ವಚನಾನಂದ ಶ್ರೀಗಳು ಇದೀಗ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.
ಪೀಠದ ಟ್ರಸ್ಟಿ ನಾಗರಾಜ್ ಆಕ್ರೋಶ ಉಚ್ಚಾಟನೆ ಮಾಡಿದರೂ ನೈತಿಕತೆ ಇಲ್ಲದ ವಚನಾನಂದ ಸ್ವಾಮೀಜಿ ಮಠದಲ್ಲೇ ಇದ್ದಾರೆ. ಸಮಾಜವನ್ನು ಒಡೆಯುವ ಕೆಲಸ ಮಾಡಿದ ಅವರನ್ನು ಸಮಾಜವೇ ಹೊರಹಾಕಿದೆ. ಈ ಎಲ್ಲ ಬೆಳವಣಿಗೆಯಾಗಲು ಸ್ವಾಮೀಜಿಯೇ ಕಾರಣ. ಸಮಾಜವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತಿದ್ದೀರಿ, ಸಮಾಜಕ್ಕೆ ನಿಮ್ಮ ಕೊಡುಗೆ ಏನಿದೆ? ಅಂತ ಹೇಳಬೇಕು. ನಿಮ್ಮನ್ನು ಪೀಠದಲ್ಲಿ ಕೂರಿಸಿದ ಉದ್ದೇಶವೇ ಬೇರೆ. ನೀವು ಮಾಡುತ್ತಿರುವ ಕೆಲಸವೇ ಬೇರೆ. ಮಠವನ್ನು ಬಿಟ್ಟು ಗೌರವಯುತವಾಗಿ ಹೋಗಬೇಕು. ಲೆಕ್ಕಕೊಡುವಂತೆ ಒಂದು ತಂಡವನ್ನು ರೆಡಿ ಮಾಡಿದ್ದೀರಿ. ಅವರು ಲೆಕ್ಕ ಕೇಳುವವರಲ್ಲ ಇದ್ದುದನ್ನೆಲ್ಲ ಗುಳುಂ ಮಾಡುವವರು. ನಿಮ್ಮ ವಿರುದ್ದ ಏಕವಚನದಲ್ಲಿ ಹೀನಾಯವಾಗಿ ಮಾತನಾಡಿದ ವ್ಯಕ್ತಿಯನ್ನು ಪಕ್ಕದಲ್ಲೇ ಕೂರಿಸಿದ್ದೀರಿ. ಈಗಾಗಲೇ ಕೂಡಲಸಂಗಮ ಮಠವನ್ನು ಮುಗಿಸಿದ್ದಾರೆ. ಈಗ ಈ ಮಠವನ್ನು ಮುಗಿಸಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ವಚನಾನಂದ ಶ್ರೀಗಳು ವಸತಿ ನಿಲಯದ ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪವನ್ನು ಟ್ರಸ್ಟ್ ಸದಸ್ಯರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಸದಸ್ಯರು ಮಕ್ಕಳ ಕಲ್ಯಾಣ ಅಭಿವೃದ್ಧಿ ಮಂಡಳಿಗೂ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

