HomeKarnatakaಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ, ಬೇಡಿಕೆ ಏನು?

ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ, ಬೇಡಿಕೆ ಏನು?

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ, ತುಮಕೂರು ಕ್ಷೇತ್ರದ ಸಂಸದ ವಿ.ಸೋಮಣ್ಣ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. 2020ರಲ್ಲಿ ಘೋಷಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮನವಿಯೊಂದನ್ನು ಸಲ್ಲಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸೋಮಣ್ಣ ಪೋಸ್ಟ್ ಹಾಕಿದ್ದು, ತುಮಕೂರಿನ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಪರಮಪೂಜ್ಯರಾಗಿದ್ದ ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ ಸಂಸ್ಮರಣ ದಿವಸ ಜನವರಿ 21 ಅನ್ನು ಕರ್ನಾಟಕ ರಾಜ್ಯದಲ್ಲಿ ʼದಾಸೋಹ ದಿವಸʼವನ್ನಾಗಿ ಆಚರಿಸಲು 2020ರಲ್ಲಿಯೇ ಕರ್ನಾಟಕ ಸರ್ಕಾರವು ಘೋಷಣೆ ಮಾಡಿದೆ.

ಈ ಘೋಷಣೆಯನ್ನು ಕಾರ್ಯರೂಪಕ್ಕೆ ತಂದು ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಲ್ಲಿ ಕೋರಿದ್ದೇನೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿ.ಸೋಮಣ್ಣ ಪತ್ರದ ವಿವರ: ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಮಠಾಧ್ಯಕ್ಷರಾಗಿದ್ದ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರು ದಿನಾಂಕ 21ನೇ ಜನವರಿ 2019ರಂದು ಇಹಲೋಕವನ್ನು ತ್ಯಜಿಸಿರುತ್ತಾರೆ.

ಅಂದು ಸಮ್ಮಿಶ್ರ ಸರ್ಕಾರದಲ್ಲಿ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳು, ಡಾ.ಜಿ. ಪರಮೇಶ್ವರ ಅವರು ಉಪಮುಖ್ಯಮಂತ್ರಿಗಳು ಮತ್ತು ಶ್ರೀ ಎಂ. ಬಿ. ಪಾಟೀಲ್ ಅವರು ರಾಜ್ಯದ ಗೃಹ ಮಂತ್ರಿಗಳಾಗಿ ಅಧಿಕಾರಿದಲ್ಲಿದ್ದ ವಿಷಯ ತಮಗೆ ತಿಳಿದ ವಿಚಾರವಾಗಿದೆ.

ಅಸಂಖ್ಯಾತ ಬಡ ಮಕ್ಕಳ ಮತ್ತು ದಿನದಲಿತರ ಉದ್ಧಾರಕ್ಕಾಗಿ ಸಿದ್ಧಗಂಗೆಯ ಶ್ರೀ ಮಠದಲ್ಲಿ ಪರಮಪೂಜ್ಯರು ಅನ್ನದಾಸೋಹವನ್ನು ಕಳೆದ ಕೆಲ ದಶಕಗಳ ಹಿಂದೆಯೇ ಅನುಷ್ಠಾನಗೊಳಿಸಿ, ಅಸಂಖ್ಯಾತ ಬಡವರ ಬದುಕಿಗೆ ದಾರಿದೀಪವಾಗಿದ್ದಾರೆ.

ಬಡವರ ಮಕ್ಕಳು ಬಡವರಾಗಿ ಉಳಿಯಬಾರದು ಎನ್ನುವ ಮಹಾತ್ಮಾಕಾಂಕ್ಷೆಯಿಂದ ಕೈಗೆತ್ತಿಗೊಂಡ ಅನ್ನದಾಸೋಹ ಕಾರ್ಯಕ್ರಮ ಪೂಜ್ಯರ ತಪಸ್ಸಿನ ಫಲವಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಾಗಿ ಮುಖ್ಯವಾಹಿನಿಗೆ ಬಂದಿದೆಯೆಂದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ.

2020ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಸವರಾಜ ಬೊಮ್ಮಾಯಿಯವರು ಪೂಜ್ಯ ಸ್ವಾಮಿಜಿವರು ಇಹಲೋಕ ತ್ಯಜಿಸಿದ ದಿವಸ ಜನವರಿ 21ನ್ನು ಪರಮಪೂಜ್ಯರ ಸ್ಮರಣಾರ್ಥ ರಾಜ್ಯದಲ್ಲಿ “ದಾಸೋಹ ದಿವಸ”ವನ್ನಾಗಿ ಆಚರಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಘೋಷಣೆ ಕಾರ್ಯಗತಕ್ಕೆ ಬಾರದೆ ಹಾಗೆಯೇ ಉಳಿದಿದೆ.

ಈ ವಿಚಾರವಾಗಿ ನಾನು ಸವಿಸ್ತಾರವಾಗಿ ವಿವರಿಸಿ ದಿನಾಂಕ 25.01.2025 ರಂದು ರಾಜ್ಯದ ಮುಖ್ಯಮಂತ್ರಿಗಳಾದ ತಮಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಜಾರಿಯಾಗದೇ ಇರುವುದು ತುಂಬಾ ವಿಷಾದದ ಸಂಗತಿಯಾಗಿದೆ. ಸದರಿ ಪತ್ರದ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ.

ಶ್ರೀಮಠದ ಪರಂಪರೆ ಮತ್ತು ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಸೇವಾ ಕೈಂಕರ್ಯದ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ತಾವು ಅರಿತವರಾಗಿದ್ದೀರಿ. ಮಹಾನ್ ತಪಸ್ವಿಗಳ ದೂರದೃಷ್ಟಿಯ ಚಿಂತನೆ, ಬಡವರ ಬಗ್ಗೆ ಕಾಳಜಿ ಮತ್ತು ತ್ರಿವಿಧ ದಾಸೋಹಗಳ ಪರಂಪರೆಯನ್ನು ಶಾಸ್ಕೃತವಾಗಿ ನೆನಪಿಸುವ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಈ ನಿಟ್ಟಿನಲ್ಲಿ ದಯಮಾಡಿ ತಾವು ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಸಂಸ್ಮರಣ ದಿವಸ ಜನವರಿ 21ನ್ನು ಕರ್ನಾಟಕ ರಾಜ್ಯದಲ್ಲಿ “ದಾಸೋಹ ದಿವಸ” ವನ್ನಾಗಿ ಜಾರಿಗೊಳಿಸಲು ಸೂಕ್ತ ಕ್ರಮ ಜರುಗಿಸಬೇಕೆಂದು ಈ ಮೂಲಕ ಮತ್ತೊಮ್ಮೆ ಕೋರುತ್ತೇನೆ ಎಂದು ಸೋಮಣ್ಣ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular