ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ನಡವಳಿಕೆ ಹಾಗೂ ನಾಗರಿಕ ಪ್ರಜ್ಞೆಯನ್ನು ಮರೆತು ವರ್ತಿಸುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದಕ್ಕೆ ಸಾಕ್ಷಿಯೆಂಬಂತೆ ಉತ್ತರಾಖಂಡದಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ರಸಿದ್ಧ ನೈಸರ್ಗಿಕ ಗುಹೆಯೊಂದರ ಒಳಗೆ ಪ್ರವಾಸಿಗರ ಗುಂಪೊಂದು ದೊಡ್ಡ ಸೌಂಡ್ ಸ್ಪೀಕರ್ ಹಿಡಿದುಕೊಂಡು, ಕಿವಿ ಬಿರಿಯುವಂತೆ ಹರಿಯಾನ್ವಿ ಹಾಡುಗಳನ್ನು ಹಾಕಿ ಹುಚ್ಚೆದ್ದು ಕುಣಿದಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಡೆಹ್ರಾಡೂನ್‌ನ ಖ್ಯಾತ ಪ್ರವಾಸಿ ತಾಣವಾದ ‘ಗುಚ್ಚು ಪಾನಿ’ (ರಾಬರ್ಸ್ ಕೇವ್) ನೈಸರ್ಗಿಕ ಗುಹೆಯ ಒಳಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹರಿಯುವ ನೀರಿನ ನಡುವೆ ಇರುವ ಶಾಂತಿಯುತ ನೈಸರ್ಗಿಕ ಗುಹೆಯೊಳಗೆ ಪ್ರವಾಸಿಗರ ಗುಂಪೊಂದು ದೊಡ್ಡ ಪೋರ್ಟಬಲ್ ಸ್ಪೀಕರ್‌ನಲ್ಲಿ ಭಾರಿ ಸದ್ದು ಮಾಡುತ್ತಾ, ಅಸಭ್ಯವಾಗಿ ಕುಣಿದು ಕುಪ್ಪಳಿಸಿದೆ. ಹಿಮಾಲಯದ ಶಾಂತ ಪರಿಸರವನ್ನು ಹಾಳುಮಾಡುವ ಈ ಅತಿರೇಕದ ವರ್ತನೆಯನ್ನು ಸ್ಥಳದಲ್ಲಿದ್ದ ಇತರರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್)ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇಂತಹ ಬೇಜವಾಬ್ದಾರಿ ಪ್ರವಾಸಿಗರ ವಿರುದ್ಧ ಮುಗಿಬಿದ್ದಿದ್ದಾರೆ. “ಶಿಕ್ಷಣ ಮತ್ತು ನಾಗರಿಕ ಪ್ರಜ್ಞೆ ಇಲ್ಲದೆ ಕೈಗೆ ದುಡ್ಡು ಬಂದರೆ ಇಂತಹ ಅಸಭ್ಯ ವರ್ತನೆಗಳು ಹೊರಬರುತ್ತವೆ” ಎಂದು ಬಳಕೆದಾರರೊಬ್ಬರು ಕಿಡಿಕಾರಿದ್ದರೆ, “ದೇವಭೂಮಿಯ ಪಾವಿತ್ರ್ಯತೆ ಮತ್ತು ಪ್ರಕೃತಿಯ ಸೌಂದರ್ಯವನ್ನು ಹಾಳುಮಾಡುತ್ತಿರುವ ಇಂಥ ಪುಂಡರ ವಿರುದ್ಧ ಉತ್ತರಾಖಂಡ ಸರ್ಕಾರ ಮತ್ತು ಪೊಲೀಸರು ಯಾವಾಗ ಎಚ್ಚೆತ್ತುಕೊಂಡು ಕಠಿಣ ಕ್ರಮ ಜರುಗಿಸುತ್ತಾರೆ?” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಅವರು ಹಾಕಿದ್ದ ಹಾಡಿನಲ್ಲಿ ಹಿಂಸೆ ಮತ್ತು ಅಪರಾಧ ಕೃತ್ಯಗಳನ್ನು ವೈಭವೀಕರಿಸುವ ಸಾಲುಗಳಿದ್ದು, ಇಂತಹ ವಿಕೃತ ಸಂಸ್ಕೃತಿಯನ್ನು ಪ್ರವಾಸಿ ತಾಣಗಳಲ್ಲಿ ಪ್ರದರ್ಶಿಸುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಸೂಕ್ಷ್ಮ ನೈಸರ್ಗಿಕ ತಾಣಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸಿ, ನಿಯಮ ಉಲ್ಲಂಘಿಸುವವರಿಗೆ ಭಾರಿ ದಂಡ ವಿಧಿಸಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿಬರುತ್ತಿದೆ.

