HomeKarnatakaತಂತ್ರಜ್ಞಾನ ಬಳಸಿ ಆನೆಗಳ ಚಲನೆ ಪತ್ತೆ: ಜನರಿಗೆ ಮೊದಲೇ ನಿಖರ ಮಾಹಿತಿ ನೀಡಲು ಸಚಿವರ ಸೂಚನೆ

ತಂತ್ರಜ್ಞಾನ ಬಳಸಿ ಆನೆಗಳ ಚಲನೆ ಪತ್ತೆ: ಜನರಿಗೆ ಮೊದಲೇ ನಿಖರ ಮಾಹಿತಿ ನೀಡಲು ಸಚಿವರ ಸೂಚನೆ

ಹಾಸನ: ತಂತ್ರಜ್ಞಾನ ಬಳಸಿ ಕೊಂಡು ಆನೆಗಳ ಚಲನೆಯನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿ ಸುಧಾರಣೆ ಮಾಡಿಕೊಂಡು ಟ್ರ‍್ಯಾಕಿಂಗ್ ಮಾಡಿ ನಿಖರವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ರಮಕೈಗೊಳ್ಳುವಂತೆ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವವರಾದ ಕೃಷ್ಣ ಭೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆನೆ-ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಹಾಸನ ಜಿಲ್ಲಾ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಆನೆ ಟ್ರ‍್ಯಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಹಾಗೂ ಅರಕಲಗೂಡು ಭಾಗದಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ನಡೆದಿದೆ. ಅದರಲ್ಲಿ ಆನೆ ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ ಎಂದು ತಿಳಿಸಿದರು.

ಹಿಂದಿನ ಎರಡು ವರ್ಷದಲ್ಲಿ ಜಿಲ್ಲೆಯಲ್ಲಿ 6 ಪ್ರಕರಣ ತೀವ್ರ ಸ್ವರೂಪದ್ದಾಗಿದ್ದು, 6 ಜನರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಸಾವಿನ ಸಂಖ್ಯೆ 3 ಕ್ಕೆ ಇಳಿದಿದೆ. ಈ ವರ್ಷ ಒಂದು ಸಾವು ಸಂಭವಿಸಿದೆ ಎಂದ ಅವರು ಇಂತಹ ಘಟನೆಗಳು ಮರುಕಳಿಸುವಂತೆ ಕ್ರಮಕೈಗೊಳ್ಳಲು ನಿರಂತರವಾಗಿ ಸಭೆ ನಡೆಸಿ ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಬಹುಮುಖ್ಯ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಡಾನೆಗಳು ವಸತಿ ಪ್ರದೇಶದಿಂದ 5 ಕಿ.ಮೀ. ದೂರದಲ್ಲಿರುವುದನ್ನು ಜನರಿಗೆ ಮುನ್ಸೂಚನೆ ಮಾಹಿತಿಯನ್ನು ನೀಡಬೇಕು ಹಾಗೂ ಕಾಡಾನೆ ಹಾವಳಿ ಇರುವ ಪ್ರದೇಶದಲ್ಲಿರುವ ಕಾಫಿ ತೋಟದ ಮಾಲೀಕರುಗಳು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯಿಂದ ಕಾರ್ಮಿಕರಿಗೆ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.

ಆನೆ ದಾಳಿ ಮಾಡಬಹುದಾದ ಅಪಾಯವಿರುವ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಸಹಾಯಕರು, ಬಿಲ್ ಕಲೆಕ್ಟರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಹಾಗೂ ಪೊಲೀಸರು ಸೇರಿದಂತೆ ಅಗತ್ಯವಿರುವ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಪರಿಣಾಮವಾಗಿ ತಳಮಟ್ಟದಲ್ಲಿ ಅನುಷ್ಟಾನ ಮಾಡುವ ಮೂಲಕ ಜನರಿಗೆ ಮಾಹಿತಿ ನೀಡಿ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಕೃತಿ ನಮ್ಮ ಹತೋಟಿಯಲ್ಲಿ ಇಲ್ಲ, ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಿಂದಾಗುವ ಸಾವು ನೋವುಗಳನ್ನು ತಪ್ಪಿಸಲು ಸರ್ಕಾರದ ಪ್ರಯತ್ನದ ಜೊತೆಗೆ ಜನರ ಸಹಕಾರ ಬಹುಮುಖ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ತಿಳಿಸಿದರು.

ಈ ಹಿಂದಿನ ಸಾವು ನೋವುಗಳನ್ನು ಅವಲೊಕಿಸಿದರೆ ಬೆಳಗಿನ 5 ಗಂಟೆಯಿಂದ 7 ಗಂಟೆ ಹಾಗೂ ಸಂಜೆ 6 ರಿಂದ 7 ಗಂಟೆಯೊಳಗೆ ಸಂಭವಿಸಿರುವುದು ಕಂಡುಬರುತ್ತದೆ. ಜನರು ಈ ವೇಳೆಯಲ್ಲಿ ಹೆಚ್ಚಾಗಿ ಓಡಾಡುವುದನ್ನು ನಿಲ್ಲಿಸಿ ಅನಾಹುತಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದರು.

ಈ ಅವಧಿಯಲ್ಲಿ ಅಲರ್ಟ್ ಕೊಟ್ಟರೂ ಜನರಿಗೆ ಸರಿಯಾಗಿ ತಲುಪದೆ ಇರಬಹುದು. ಆ ಕಾರಣಕ್ಕಾಗಿ ಹಿಂದಿನ ದಿನವೇ ಆನೆಗಳ ಚಲನೆ ಕುರಿತು ನಿರ್ದಿಷ್ಟ ಸ್ಥಳದ ಬಗ್ಗೆ ನಿಖರವಾಗಿ ಜನರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರಲ್ಲದೆ, ಮುನ್ಸೂಚನೆ ಉಲ್ಲಂಘನೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದರು.

ಕಾಡಾನೆಗಳ ಸ್ಥಳಾಂತರ ಮಾಡಿ ಎಂಬ ಜನರ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಒಂದು ಪ್ರದೇಶವನ್ನು ಗುರುತಿಸಿ ಸಾಫ್ಟ್ ರೀಲಿಫ್ ಸೆಂಟರ್ ಮಾಡಲು ತೀರ್ಮಾನ ಅಂತಿಮ ಹಂತದಲ್ಲಿದೆ. ಅನುದಾನ ಲಭ್ಯವಿದೆ ಹಾಗೂ ಹೈಕೋರ್ಟ್ ಕೆಲವು ಮಾರ್ಗ ಸೂಚಿಗಳನ್ನು ನೀಡಿದ್ದು, 6 ತಿಂಗಳಲ್ಲಿ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದು ಭಾಗಶಃ ಕಾಡಾನೆಗಳನ್ನು ಸಾಫ್ಟ್ ರೀಲಿಫ್ ಸೆಂಟರ್‌ಗೆ ಸ್ಥಳಾಂತರ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಅವರು ಆನೆ ಹಾವಳಿ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ಚಿರತೆ ಮತ್ತು ಕಾಡುಕೋಣಗಳ ದಾಳಿಯಿಂದ ಮೃತಪಟ್ಟಿರುವ ಬಗ್ಗೆ ವಿವರಿಸಿದರು.

ಸಂಸದರಾದ ಶ್ರೇಯಸ್ ಎಂ ಪಟೇಲ್, ಶಾಸಕರಾದ ಹೆಚ್.ಕೆ.ಸುರೇಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲು, ಜಿಲ್ಲಾಧಿಕಾರಿ ಲತಾ ಕುಮಾರಿ ಉಪಸ್ಥಿತರಿದ್ದರು.

ಸಭೆಯ ನಂತರ ಸಚಿವರು ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಬಿಕ್ಕೋಡು ಗ್ರಾಮದಲ್ಲಿ ಆನೆಗಳ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿದರು, ನಂತರ ಇಟಿಎಫ್ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.

ನಂತರ ಚಿಕ್ಕಮಗಳೂರು-ಬೇಲೂರು ರೈಲ್ವೆ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿಯನ್ನು ಪರಿಶೀಲಿಸಿದರು.ನಂತರ ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular