ಭಾರತದ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಬೆಂಗಳೂರು ನಗರಕ್ಕೆ ಆಗಮಿಸಿದ್ದರು. ಅವರು ಆಟೋದಲ್ಲಿ ನಗರದಲ್ಲಿ ಸುತ್ತಾಡಿದರು. ಮಸಾಲೆ ದೋಸೆ, ಫಿಲ್ಟರ್ ಕಾಫಿ ಸವಿದರು.
ಈ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಭಾರತದ ಅಮೆರಿಕ ರಾಯಭಾರಿ ಗೌರವಾನ್ವಿತ ಸೆರ್ಗಿಯೋ ಗೋರ್ ಅವರನ್ನು ಇಂದು ಬೆಂಗಳೂರಿಗೆ ಸ್ವಾಗತಿಸಲು ಹರ್ಷಿಸುತ್ತೇನೆ ಎಂದು ಹೇಳಿದ್ದಾರೆ.
ಇಂದಿರಾನಗರದ ಫಿಲ್ಟರ್ ಕಾಫಿಯಲ್ಲಿ ಮಸಾಲೆ ದೋಸೆ ಮತ್ತು ಕಡಕ್ ಕಾಫಿ ಸವಿಯುತ್ತಾ, ಮಧ್ಯಂತರ ವ್ಯಾಪಾರ ಒಪ್ಪಂದದ ನಂತರದ ವಾಣಿಜ್ಯ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಭಾರತ-ಅಮೆರಿಕ ಪಾಲುದಾರಿಕೆಯ ಬಗ್ಗೆ ನಾವು ವಿವರವಾದ ಚರ್ಚೆ ನಡೆಸಿದೆವು ಎಂದು ತಿಳಿಸಿದ್ದಾರೆ.
ತೇಜಸ್ವಿ ಸೂರ್ಯ ಅವರು ಅವರಿಗೆ ನಮ್ಮ ಹೆಮ್ಮೆಯ ‘ನಮ್ಮ ಆಟೋ’ವನ್ನು ಪರಿಚಯಿಸಿದೆ. ಅದೊಂದು ನಿಜಕ್ಕೂ ಸ್ಮರಣೀಯ ಸವಾರಿಯಾಗಿತ್ತು ಎಂದು ಹೇಳಿದ್ದಾರೆ. ಆಟೋದಲ್ಲಿ ಅವರ ಜೊತೆ ಪ್ರಯಾಣ ಮಾಡುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು ನಗರ ನಿಜವಾಗಿಯೂ ಮಸಾಲೆ ದೋಸೆಯಿಂದ ಮಷಿನ್ ಲರ್ನಿಂಗ್ ತನಕ ಪ್ರತಿನಿಧಿಸುತ್ತದೆ. ಇದು ಸಂಪ್ರದಾಯದೊಂದಿಗೆ ಅತ್ಯಾಧುನಿಕ ನವೀನತೆಯನ್ನು ಸಮ್ಮಿಳಿತಗೊಳಿಸುತ್ತಾ, ನಮ್ಮ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
700ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು ಮತ್ತು ಭಾರತದ ಸಾಫ್ಟ್‌ವೇರ್ ರಫ್ತಿನ ಶೇಕಡಾ 43ರಷ್ಟು ಪಾಲನ್ನು ಹೊಂದಿರುವ ನಮ್ಮ ಬೆಂಗಳೂರು ನಗರವು, ಭಾರತ-ಅಮೆರಿಕ ಆರ್ಥಿಕ ಸಂಬಂಧಗಳಿಗೆ ಕೇಂದ್ರಬಿಂದುವಾಗಿದೆ.
ಭಾರತದ ಶೇಕಡಾ 40ರಷ್ಟು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ ನೆಲೆಯಾಗಿರುವ ಬೆಂಗಳೂರು, ಉಭಯ ದೇಶಗಳ ನಡುವಿನ ನಾವೀನ್ಯತೆ ಆಧಾರಿತ ಪಾಲುದಾರಿಕೆಯನ್ನು ಮುನ್ನಡೆಸುತ್ತಲೇ ಇದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

