ಯುಪಿಐ ಮೂಲಕ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಕಳುಹಿಸಿದಾಗ ಇನ್ನು ಮುಂದೆ ಒಂದು ಗಂಟೆಯ ಕಾಲ ‘ಕೂಲಿಂಗ್ ಪೀರಿಡ್’ (Cooling Period) ಇರಲಿದೆ. ಅಂದರೆ, ಈ ಅವಧಿಯಲ್ಲಿ ವಹಿವಾಟನ್ನು ತಡೆಹಿಡಿಯಲಾಗುತ್ತದೆ. ಆ ಕಾಯುವಿಕೆಯ ಸಮಯ ಮುಗಿದ ನಂತರವೇ ಹಣವು ಸ್ವೀಕೃತಿದಾರರ ಖಾತೆಗೆ ಜಮೆಯಾಗುತ್ತದೆ. ಈ ನಿಯಮದ ಕುರಿತು ಆರ್‌ಬಿಐ ನೀಡಿರುವ ಹೆಚ್ಚಿನ ವಿವರಗಳು ಇಲ್ಲಿವೆ.
ಶೀಘ್ರದಲ್ಲೇ ಯುಪಿಐ ನಿಯಮಗಳು ಸಂಪೂರ್ಣವಾಗಿ ಬದಲಾಗಲಿವೆ. ಇಲ್ಲಿಯವರೆಗೆ ಯುಪಿಐ ಆ್ಯಪ್‌ಗಳಲ್ಲಿ ಹಣ ವರ್ಗಾವಣೆ ಮಾಡಿದರೆ ಕೆಲವೇ ಸೆಕೆಂಡುಗಳಲ್ಲಿ ಕೆಲಸ ಮುಗಿಯುತ್ತಿತ್ತು. ಆದರೆ, ಯುಪಿಐ ಮೂಲಕ ನಡೆಯುತ್ತಿರುವ ವಂಚನೆಗಳನ್ನು ತಡೆಗಟ್ಟಲು ಆರ್‌ಬಿಐ ಕಠಿಣ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ನೀವು 10 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಕಳುಹಿಸಲು ಬಯಸಿದರೆ ಒಂದು ಗಂಟೆಯ ಕಾಯುವಿಕೆ ಕಡ್ಡಾಯ. ವಹಿವಾಟು ನಡೆಸಿದ ಒಂದು ಗಂಟೆಯ ನಂತರ ಹಣ ವರ್ಗಾವಣೆಯಾಗುತ್ತದೆ. ಈ ನಿರ್ಧಾರವು ಆರ್ಥಿಕ ವಲಯದಲ್ಲಿ ಆತಂಕ ಮೂಡಿಸಿದ್ದು, ಬ್ಯಾಂಕುಗಳು ಮತ್ತು ಫಿನ್‌ಟೆಕ್ ಕಂಪನಿಗಳು ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿವೆ.
ಆರ್‌ಬಿಐ ನೀಡಿರುವ ವಿನಾಯಿತಿಗಳು
ಈ ನಿಯಮಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಕೆಲವು ವಿನಾಯಿತಿಗಳನ್ನು ನೀಡಿದೆ:
- ಹೊಸ ಪಾವತಿದಾರರಿಗೆ ಮಾತ್ರ: ನೀವು ಮೊದಲ ಬಾರಿಗೆ ಯಾರಿಗಾದರೂ ಹಣ ಪಾವತಿಸುತ್ತಿದ್ದರೆ ಮಾತ್ರ ಈ ಒಂದು ಗಂಟೆಯ ಕಾಯುವಿಕೆ ಅನ್ವಯಿಸುತ್ತದೆ.
- ನೋಂದಾಯಿತ ವ್ಯಾಪಾರಿಗಳು: ಮಾನ್ಯತೆ ಪಡೆದ ವ್ಯಾಪಾರಿಗಳಿಗೆ (Merchants) ಪಾವತಿಸುವಾಗ ಯಾವುದೇ ವಿಳಂಬವಿರುವುದಿಲ್ಲ.
- ಹಳೆಯ ಪಾವತಿದಾರರು: ನೀವು ಈ ಹಿಂದೆ ಹಣ ಕಳುಹಿಸಿರುವ ವ್ಯಕ್ತಿಗಳಿಗೆ ಪಾವತಿ ಮಾಡುವಾಗ ಈ ನಿಯಮ ಅನ್ವಯಿಸುವುದಿಲ್ಲ.
- ವೈಟ್ ಲಿಸ್ಟ್ ಸೌಲಭ್ಯ: ಬಳಕೆದಾರರು ತಮ್ಮ ನಂಬಿಕಸ್ತ ಪಾವತಿದಾರರನ್ನು ‘ವೈಟ್ ಲಿಸ್ಟ್’ ಮಾಡಿಕೊಳ್ಳುವ ಸೌಲಭ್ಯವನ್ನು ಹೊಂದಿರುತ್ತಾರೆ, ಇವರಿಗೆ ಹಣ ಕಳುಹಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.
ಯುಪಿಐ ವಹಿವಾಟಿಗೆ ಅಡ್ಡಿ?
ಯುಪಿಐ ವೇಗವಾಗಿ ಮತ್ತು ಸುಲಭವಾಗಿರುವುದರಿಂದ ಹೆಚ್ಚಿನ ಜನರು ಇದನ್ನು ಬಳಸುತ್ತಿದ್ದಾರೆ. ಆದರೆ ಪಾವತಿಯನ್ನು ಒಂದು ಗಂಟೆ ವಿಳಂಬಗೊಳಿಸುವುದರಿಂದ ಡಿಜಿಟಲ್ ಪಾವತಿ ವ್ಯವಸ್ಥೆಗೆ ಅಡ್ಡಿಯಾಗಬಹುದು ಎಂದು ಹಣಕಾಸು ಸಂಸ್ಥೆಗಳು ಎಚ್ಚರಿಸಿವೆ. ಸೈಬರ್ ವಂಚನೆಗಳನ್ನು ತಡೆಯಲು ಆರ್‌ಬಿಐ ಈ ಕ್ರಮ ಕೈಗೊಂಡಿದ್ದರೂ, ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
“ರೋಗಕ್ಕಿಂತ ಚಿಕಿತ್ಸೆಯೇ ಭಯಾನಕವಾಗಿದೆ” ಎಂದು ತಜ್ಞರು ಈ ನಿರ್ಧಾರವನ್ನು ಟೀಕಿಸುತ್ತಿದ್ದಾರೆ. ಪಾವತಿಯನ್ನು ವಿಳಂಬಗೊಳಿಸುವ ಬದಲಿಗೆ ಸೈಬರ್ ವಂಚಕರನ್ನು ಗುರುತಿಸಿ ಶಿಕ್ಷಿಸುವುದರ ಮೇಲೆ ಗಮನ ಹರಿಸಬೇಕು ಎಂದು ಅವರು ಹೇಳುತ್ತಿದ್ದಾರೆ. NEFT ಅಥವಾ IMPS ನಂತಹ ವಿಧಾನಗಳಲ್ಲಿ ಅಕೌಂಟ್ ನಂಬರ್ ಮತ್ತು IFSC ಕೋಡ್ ಅಗತ್ಯವಿರುವುದರಿಂದ ಜನರು ಯುಪಿಐ ಅನ್ನು ಇಷ್ಟಪಡುತ್ತಿದ್ದರು. ಆದರೆ ಆರ್‌ಬಿಐನ ಈ ನಿರ್ಧಾರವು ‘ರಿಯಲ್ ಟೈಮ್’ ವಹಿವಾಟಿನ ಮೂಲ ಉದ್ದೇಶವನ್ನೇ ಹಾಳುಗೆಡವುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಡಿಜಿಟಲ್ ಪಾವತಿಯಿಂದ ಜನರನ್ನು ಮತ್ತೆ ನಗದು ಬಳಕೆಯತ್ತ ಮುಖ ಮಾಡುವಂತೆ ಮಾಡಬಹುದು ಎಂಬ ಆತಂಕವೂ ಇದೆ.

