ನವದೆಹಲಿ: ಈಪಿಎಫ್ಒ (EPFO) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಪಿಎಫ್ (PF) ಹಣವನ್ನು ಯುಪಿಐ ಮೂಲಕ ಸುಲಭವಾಗಿ ಹಿಂಪಡೆಯುವ ಸೌಲಭ್ಯವನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಪ್ರಸ್ತುತ ಈ ಸೇವೆಯು ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಇತ್ತೀಚೆಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ. ದೇಶದ 7 ಕೋಟಿಗೂ ಹೆಚ್ಚು ಪಿಎಫ್ ಚಂದಾದಾರರು ಈ ಸೌಲಭ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಸೇವೆ ಜಾರಿಯಾದರೆ ಸೆಕೆಂಡುಗಳಲ್ಲಿ ಹಣವನ್ನು ವಿತ್ಡ್ರಾ ಮಾಡಿಕೊಳ್ಳಬಹುದು. ಆದರೆ, ಈ ಸೇವೆಯನ್ನು ಪಡೆಯಲು ಚಂದಾದಾರರು ತಮ್ಮ ಖಾತೆಯಲ್ಲಿ ಈ ಕೆಳಗಿನ 5 ಪ್ರಮುಖ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
1. ಯುಎಎನ್ (UAN) ಆಕ್ಟಿವೇಶನ್: ಯುಪಿಐ ಮೂಲಕ ಪಿಎಫ್ ಹಣ ಪಡೆಯಲು ನಿಮ್ಮ ಯುಎಎನ್ ಸಂಖ್ಯೆ ಆಕ್ಟಿವ್ ಆಗಿರಬೇಕು. ಅಲ್ಲದೆ, ನಿಮ್ಮ ಪಾಸ್ವರ್ಡ್ ಅನ್ನು ಸರಿಯಾಗಿ ನೆನಪಿಟ್ಟುಕೊಳ್ಳಿ. ತುರ್ತು ಸಮಯದಲ್ಲಿ ಹಣ ಪಡೆಯಲು ಇದು ಅತ್ಯಗತ್ಯ.
2. ಮೊಬೈಲ್ ಸಂಖ್ಯೆ ಅಪ್ಡೇಟ್: ನಿಮ್ಮ ಪಿಎಫ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು. ಒಂದು ವೇಳೆ ನೀವು ಹಳೆಯ ಸಂಖ್ಯೆಯನ್ನು ಬಳಸುತ್ತಿದ್ದರೆ, ತಕ್ಷಣ ಈಪಿಎಫ್ಒ ವೆಬ್ಸೈಟ್ಗೆ ಭೇಟಿ ನೀಡಿ ಹೊಸ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಕೊಳ್ಳಿ. ಎಸ್ಎಂಎಸ್ (SMS) ಅಧಿಸೂಚನೆಗಳನ್ನು ಪಡೆಯಲು ಇದು ಬಹಳ ಮುಖ್ಯ.
3. ಆಧಾರ್ ಮತ್ತು ಪ್ಯಾನ್ (PAN) ವಿವರಗಳು: ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ನಲ್ಲಿರುವಂತೆ, ಈಪಿಎಫ್ಒ ದಾಖಲೆಗಳಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳು ನಿಖರವಾಗಿ ಇರಬೇಕು. ವಿವರಗಳಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಕ್ಲೈಮ್ಗಳು ತಿರಸ್ಕೃತಗೊಳ್ಳಬಹುದು. ಅಲ್ಲದೆ, ಪ್ಯಾನ್ ಕಾರ್ಡ್ ಅನ್ನು ಈಪಿಎಫ್ಒ ವೆಬ್ಸೈಟ್ಗೆ ಲಿಂಕ್ ಮಾಡದಿದ್ದರೆ ಟಿಡಿಎಸ್ (TDS) ಕಡಿತವಾಗುವ ಸಾಧ್ಯತೆ ಇರುತ್ತದೆ.
4. ಬ್ಯಾಂಕ್ ಖಾತೆ ವಿವರ: ಬ್ಯಾಂಕ್ ಖಾತೆಯು ನಿಮ್ಮದೇ ಹೆಸರಿನಲ್ಲಿರಬೇಕು. ಜಂಟಿ ಖಾತೆ ಅಥವಾ ಮುಚ್ಚಲ್ಪಟ್ಟ ಬ್ಯಾಂಕ್ ಖಾತೆಗಳನ್ನು ನೀಡಬೇಡಿ. ಅಲ್ಲದೆ, ನಿಮ್ಮ ಪ್ರೈಮರಿ ಯುಪಿಐ ಐಡಿ (UPI ID) ಸಕ್ರಿಯವಾಗಿರಲಿ.
5. ನಾಮಿನಿ ವಿವರಗಳು ಮತ್ತು ಖಾತೆ ವರ್ಗಾವಣೆ: ಈಪಿಎಫ್ಒ ಪೋರ್ಟಲ್ನಲ್ಲಿ ‘ಇ-ನಾಮಿನೇಷನ್’ ವಿವರಗಳನ್ನು ಅಪ್ಡೇಟ್ ಮಾಡಿ. ಇದರೊಂದಿಗೆ, ನಿಮ್ಮ ಹಳೆಯ ಕಂಪನಿಗಳ ಪಿಎಫ್ ಖಾತೆಗಳನ್ನು ಪ್ರಸ್ತುತ ಕೆಲಸ ಮಾಡುತ್ತಿರುವ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ.
ಈ ಐದು ವಿಷಯಗಳನ್ನು ಸಕಾಲದಲ್ಲಿ ಅಪ್ಡೇಟ್ ಮಾಡಿಕೊಳ್ಳುವುದರಿಂದ, ಮುಂದಿನ ದಿನಗಳಲ್ಲಿ ಯುಪಿಐ ಮೂಲಕ ಸುಲಭವಾಗಿ ಪಿಎಫ್ ಹಣವನ್ನು ಪಡೆಯಲು ಯಾವುದೇ ತೊಂದರೆ ಉಂಟಾಗುವುದಿಲ್ಲ.
ಗಮನಿಸಿ: ನಿಮ್ಮ ಆಧಾರ್ ಸಂಖ್ಯೆಯಂತಹ ಸೂಕ್ಷ್ಮ ಮಾಹಿತಿಯನ್ನು ಈಪಿಎಫ್ಒ ಪೋರ್ಟಲ್ನಲ್ಲಿ ಭರ್ತಿ ಮಾಡುವಾಗ ಎಚ್ಚರ ವಹಿಸಿ. ಯಾವುದೇ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಅನಾಮಧೇಯ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬೇಡಿ.

