ಶಹಜಹಾನ್ ಪುರ: ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ರೈಲ್ವೆ ಹಳಿ ದಾಟುತ್ತಿದ್ದಾಗ ಮೋಟಾರ್ ಸೈಕಲ್ ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ. ರೌಜಾ ಪೊಲೀಸ್ ಠಾಣೆ ವ್ಯಾಪ್ತಿಯ ರೌಜಾ ರೈಲ್ವೆ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ.
ಐದು ಜನರು ಒಂದೇ ಮೋಟಾರ್ ಸೈಕಲ್‌ನಲ್ಲಿದ್ದರು. ಸಂಜೆ 6.30 ರ ಸುಮಾರಿಗೆ, ಲಕ್ನೋ ದಿಕ್ಕಿನಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮವಾಗಿ ಅದರಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ರಾಜೇಶ್ ದ್ವಿವೇದಿ ಹೇಳಿದ್ದಾರೆ.
ಸೇಠ್‌ಪಾಲ್(40), ಅವರ ಪತ್ನಿ ಪೂಜಾ(38), ಅವರ ನಾಲ್ಕು ಮತ್ತು ಆರು ವರ್ಷದ ಇಬ್ಬರು ಮಕ್ಕಳು ಮತ್ತು ಸೇಠ್‌ಪಾಲ್ ಅವರ ಸೋದರ ಮಾವ ಹರಿ ಓಂ(45) ಎಂದು ಗುರುತಿಸಿದ್ದಾರೆ. ಅವರೆಲ್ಲರೂ ಲಖಿಂಪುರ ಜಿಲ್ಲೆಯ ವಂಕಾ ಗ್ರಾಮದ ನಿವಾಸಿಗಳು ಎಂದು ಎಸ್‌ಪಿ ತಿಳಿಸಿದ್ದಾರೆ. ಈ ದುರ್ಘಟನೆ ಸಂಭವಿಸಿದಾಗ ಕುಟುಂಬವು ವಂಕಾಗೆ ಹಿಂತಿರುಗುತ್ತಿತ್ತು ಎಂದು ಎಸ್ಪಿ ದ್ವಿವೇದಿ ಹೇಳಿದ್ದಾರೆ.

