ದಾವಣಗೆರೆ: ಜನಗಣತಿಯ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಾಣೆಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಲಿಂಗಾಯತ ಸಮುದಾಯದ ಹಲವು ಒಳಪಂಗಡಗಳು ಸರ್ಕಾರದ ಸೌಲಭ್ಯ ಪಡೆಯುತ್ತಿವೆ. ಜಾತಿಗಣತಿಯಲ್ಲಿ ಉಪ ಪಂಗಡ ನಮೂದಿಸದೆ ಇದ್ದಲ್ಲಿ ಸೌಲಭ್ಯ ಕೈ ತಪ್ಪಬಹುದು. ಹೀಗಾಗಿ ಜಾತಿಗಣತಿಯ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿಯ ಕಾಲಂನಲ್ಲಿ ಉಪ ಪಂಗಡ ಎಂದು ದಾಖಲಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5ರವರೆಗೆ 31 ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ಕೈಗೊಳ್ಳಲಾಗಿದೆ. ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಅಭಿಯಾನ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಸಮರೋಪ ನಡೆಯಲಿದೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿ ಒಂದು ವರ್ಷವಾಗಿದೆ. ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಶ್ರೀಗಳು ಹೇಳಿದ್ದಾರೆ.