ನವದೆಹಲಿ: 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದೆ. ಲೋಕಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇದು ಅಭಿವೃದ್ಧಿ ಹೊಂದಿದ ಭಾರತದ ಬಜೆಟ್ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು. ಎಲ್ಲಾ ವರ್ಗದವರಿಗಾಗಿ ಬಜೆಟ್ ಸಿದ್ಧಪಡಿಸಲಾಗಿದೆ. ವಿಕಸಿತ ಭಾರತದ ಗುರಿ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಇದೇ ವೇಳೆ ದೇಶದ ಜನತೆಗೆ ಮಾಘ ಪೂರ್ಣಿಮಾ, ರವಿದಾಸ್ ಜಯಂತಿಯ ಶುಭ ಕೋರಿದರು.
ಕಳೆದ 12 ವರ್ಷಗಳಲ್ಲಿ, ಅನಿಶ್ಚಿತತೆಗಳ ಹೊರತಾಗಿಯೂ, ನಾವು ಸ್ಥಿರವಾದ ಆರ್ಥಿಕತೆಯನ್ನು ಕಾಯ್ದುಕೊಂಡಿದ್ದೇವೆ. ನಾವು ದೂರಗಾಮಿ ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ನಾವು ಸ್ವಾವಲಂಬನೆಯನ್ನು ಪ್ರಮುಖ ಉದ್ದೇಶವಾಗಿ ಕಾಯ್ದುಕೊಂಡಿದ್ದೇವೆ. ನಾವು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಾವು ವ್ಯಾಪಾರ ಮತ್ತು ಬಹುಪಕ್ಷೀಯತೆಗೆ ಬೆದರಿಕೆ ಇರುವ ಬಾಹ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ.ಹೊಸ ತಂತ್ರಜ್ಞಾನವು ಉತ್ಪಾದನಾ ವ್ಯವಸ್ಥೆಗಳನ್ನು ಪರಿವರ್ತಿಸುತ್ತಿದೆ. ಅಭಿವೃದ್ಧಿ ಹೊಂದಿದ ಭಾರತದತ್ತ ಭಾರತವು ಆತ್ಮವಿಶ್ವಾಸದ ಹೆಜ್ಜೆಗಳನ್ನು ಇಡುವುದನ್ನು ಮುಂದುವರಿಸುತ್ತದೆ. ಭಾರತ ಜಾಗತಿಕ ಮಾರುಕಟ್ಟೆಗಳಲ್ಲಿ ಸಂಯೋಜನೆಗೊಳ್ಳಬೇಕು ಮತ್ತು ಹೆಚ್ಚು ಹೆಚ್ಚು ರಫ್ತು ಮಾಡಬೇಕು. ವಿಶ್ವದ ಅತಿದೊಡ್ಡ ಆರ್ಥಿಕತೆಯಾಗುವ ನಮ್ಮ ಪ್ರಯಾಣದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ಜನರಿಗೆ ಧನ್ಯವಾದಗಳು ಎಂದರು.

