ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದೆ. 2026-27ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರ ಭಾನುವಾರ ಮಂಡನೆ ಮಾಡುತ್ತಿದ್ದಾರೆ.
ಬಿಜೆಪಿ ಸಾಂಪ್ರದಾಯಿಕ ಮತ್ತು ಡಿಜಿಟಲ್ ಮೂಲಕ ಜನರನ್ನು ಸಂಪರ್ಕಿಸಿ ಬಜೆಟ್ ಅನ್ನು ಅವರಿಗೆ ತಲುಪಿಸಲು ರಾಷ್ಟ್ರಮಟ್ಟದ ಅಭಿಯಾನವನ್ನು ರೂಪಿಸಿದೆ. ಇದರಲ್ಲಿ ಪತ್ರಿಕಾಗೋಷ್ಠಿ, ರೀಲ್ಸ್ ಸೇರಿದಂತೆ ವಿವಿಧ ಪ್ರಚಾರ ತಂತ್ರಗಳು ಸೇರಿವೆ.
ಕೇಂದ್ರ ಬಜೆಟ್ 2026-27 ವಿವರಿಸಲು ಬಿಜೆಪಿ ಫೆಬ್ರವರಿ 1 ರಿಂದ 15ರ ತನಕ ರಾಷ್ಟ್ರವ್ಯಾಪಿ ಪ್ರಚಾರವನ್ನು ಪ್ರಾರಂಭಿಸುತ್ತಿದೆ. ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಸುಮಾರು 150 ಸ್ಥಳಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜನರ ಜೊತೆ ಸಂವಾದ ನಡೆಸಲಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ನೇತೃತ್ವದ ತಂಡವನ್ನು ಈ ರಾಷ್ಟ್ರಮಟ್ಟದ ಅಭಿಯಾನ ನೋಡಿಕೊಳ್ಳಲು ನೇಮಕ ಮಾಡಲಾಗಿದೆ. ರಾಜ್ಯ ಬಿಜೆಪಿ ಘಟಕದ ಜೊತೆ ಈ ತಂಡ ಸಂಪರ್ಕವನ್ನು ಸಾಧಿಸಿ ರಾಜ್ಯದಲ್ಲಿ ಹೇಗೆ ಪ್ರಚಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಲಿದೆ.
ಬಿಜೆಪಿ ಬಜೆಟ್ ಅನ್ನು ಯುವ ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ತಲುಪಿಸಲು ತಂತ್ರ ರೂಪಿಸಿದೆ. ಇದಕ್ಕಾಗಿ ರೀಲ್ಸ್, ಡಿಜಿಟಲ್ ಕಟೆಂಟ್ಗಳನ್ನು ತಯಾರು ಮಾಡುತ್ತಿದೆ. ಬಜೆಟ್ನ ಪ್ರಮುಖ ಅಂಶಗಳು ಯಾವುದು? ಎಂದು ಯುವ ಜನರಿಗೆ ತಿಳಿಸಲಾಗುತ್ತದೆ.
ರಾಜ್ಯಗಳಲ್ಲಿ ಬಿಜೆಪಿಯ ಸಚಿವರು, ರಾಜ್ಯ ಘಟಕದ ಅಧ್ಯಕ್ಷರು, ಸಂಸದರು, ಹಿರಿಯ ನಾಯಕರು ಮಾಧ್ಯಮಗಳು, ಸಂವಾದದ ಮೂಲಕ ಬಜೆಟ್ ಬಗ್ಗೆ ಜನರಿಗೆ ಮಾಹಿತಿಗಳನ್ನು ನೀಡಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಈ ಅಭಿಯಾನ ನಡೆಯಲಿದೆ.
5 ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಬಜೆಟ್ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ತಮಿಳುನಾಡಿನ ನಾಯಕರು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಟೀಕೆಗಳನ್ನು ಮಾಡುತ್ತಿದ್ದಾರೆ. ಈ ವರ್ಷ ಚುನಾವಣೆ ನಡೆಯುವ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದಾಗಿದೆ.
ಜನರ ಬಳಿಗೆ ಬಜೆಟ್: ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ಗುರುವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಈಗಾಗಲೇ ಈ ಕುರಿತು ಚರ್ಚೆಗಳು ಸಾಗಿವೆ.
ಆರ್ಥಿಕತೆಯ ಸ್ಥಿತಿಗತಿ ಜಾಗತಿಕ ವಾತಾವರಣವು ಅಸ್ಥಿರವಾಗಿದ್ದು, ಬೆಳವಣಿಗೆಯು ನಿರೀಕ್ಷೆಗಿಂತ ಉತ್ತಮವಾಗಿದೆ. ಆದರೆ ತೀವ್ರಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವ್ಯಾಪಾರ ಮತ್ತು ಹಣಕಾಸಿನ ದುರ್ಬಲತೆಗಳ ನಡುವೆ ಅಪಾಯಗಳು ಹೆಚ್ಚಿವೆ ಎಂದು ಸಮೀಕ್ಷೆ ಹೇಳಿದೆ.

