ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಂತಕರ ಅಟ್ಟಹಾಸ ಮುಂದುವರಿದಿದ್ದು, ನೆಲಮಂಗಲದ ಗಂಗಮ್ಮನ ಗುಡಿ ವ್ಯಾಪ್ತಿಯ ಬಿಡಿಎ ಲೇಔಟ್‌ನಲ್ಲಿ ಅನಾಮಧೇಯ ವ್ಯಕ್ತಿಯ ಶವವೊಂದು ಪತ್ತೆಯಾಗಿರುವುದು ಇಡೀ ಬಡಾವಣೆಯನ್ನು ಬೆಚ್ಚಿಬೀಳಿಸಿದೆ.
ಕಿರಾತಕರು ವ್ಯಕ್ತಿಯನ್ನು ಕೊಲೆ ಮಾಡಿ, ಶವವನ್ನು ಚೀಲದಲ್ಲಿ ತುಂಬಿ ಜನರಿಲ್ಲದ ಸಮಯದಲ್ಲಿ ಬಡಾವಣೆಯ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ. ಇಂದು ಮುಂಜಾನೆ ದುರ್ನಾತ ಬೀರುತ್ತಿದ್ದ ಚೀಲವನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಚೀಲವನ್ನು ಬಿಚ್ಚಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಹಂತಕರಿಗಾಗಿ ಬಲೆ ಬೀಸಿದ್ದಾರೆ.

