ಈ ವರ್ಷ ದೇಶದಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳಗಳು, ಕೆರೆಕಟ್ಟೆ ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆಗಳು ಕೆರೆಗಳಂತಾಗಿದ್ದು, ವಾಹನ ಸವಾರರು ಸಂಚರಿಸುವುದೇ ದುಸ್ತರವಾಗಿದೆ. ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ವಾಹನ ಚಲಾಯಿಸಲು ಹೋಗಿ ಹಲವರು ಅಪಾಯ ತಂದೊಡ್ಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂಬ ಸೂಚನೆ ನೀಡುತ್ತಿದ್ದರು ಸಹ ಬಹಳಷ್ಟು ಮಂದಿ ಲೆಕ್ಕಿಸುತ್ತಿಲ್ಲ.
ಅದರಲ್ಲೂ ಮಳೆಗಾಲದಲ್ಲಿ ಪ್ರವಾಸಿ ತಾಣಗಳಿಗೆ ತೆರಳುತ್ತಿರುವ ಪ್ರವಾಸಿಗರು ಎಚ್ಚರಿಕೆಯ ಬೋರ್ಡ್ ಗಳನ್ನು ಹಾಕಿದ್ದರೂ ಸಹ ಅದನ್ನು ಗಣನೆಗೆ ತೆಗೆದುಕೊಳ್ಳದೆ ಸಾಹಸ ಮಾಡಲು ಹೋಗಿ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ಈಗಾಗಲೇ ಇಂತಹ ಹಲವು ಪ್ರಕರಣಗಳು ನಡೆದಿದ್ದು, ಇದಕ್ಕೆ ಈಗ ಮತ್ತೊಂದು ಸೇರ್ಪಡೆಯಾಗಿದೆ. ಉತ್ತರಾಖಂಡ ಚಮೋಲಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಕಂಡುಬರುವಂತೆ ಜಲಪಾತವೊಂದರ ಬಳಿ ಕೆಲ ಪ್ರವಾಸಿಗರು ಸ್ನಾನ ಮಾಡುತ್ತಿದ್ದಾರೆ. ಆಗ ಇದ್ದಕ್ಕಿದ್ದಂತೆ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಜಲಕ್ರೀಡೆಯಾಡುತ್ತಿದ್ದ ಪ್ರವಾಸಿಗರು ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋಗಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಈ ರೀತಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗುವುದು ಸಾಮಾನ್ಯವಾಗಿದ್ದು, ಹೀಗಾಗಿ ಪ್ರವಾಸಿಗರು ನೀರಿನ ಜೊತೆ ಹುಡುಗಾಟವಾಡುವುದನ್ನು ಬಿಡಬೇಕಿದೆ. ಘಟನೆಯ ವೀಡಿಯೋವನ್ನು ಉತ್ತರಾಖಂಡನ ಚಮೋಲಿ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದು, ಪ್ರವಾಸಿಗರು ಮಳೆಗಾಲದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.
https://twitter.com/chamolipolice/status/1819321069297123592?ref_src=twsrc%5Etfw%7Ctwcamp%5Etweetembed%7Ctwterm%5E1819321069297123592%7Ctwgr%5E2709f0791026646754f21935b3949fb0d4026ea4%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper-dh32aa52fd1e564d7ab912b538d71eaab2%2Fviralvideounbelievableunsuspectingtouristssweptawaybysurgingfloodwateratchamoliwatch-newsid-n624943951