HomeIndiaಮರದ ಕೆಳಗೆ ಆರಂಭವಾದ ಬಡ ಮಕ್ಕಳ ಶಾಲೆ ಇಂದು ಹೆಮ್ಮರ ; ಬಿಗ್‌ ಬಿ ಎದುರು...

ಮರದ ಕೆಳಗೆ ಆರಂಭವಾದ ಬಡ ಮಕ್ಕಳ ಶಾಲೆ ಇಂದು ಹೆಮ್ಮರ ; ಬಿಗ್‌ ಬಿ ಎದುರು ತ್ಯಾಗದ ಬದುಕು ಬಿಚ್ಚಿಟ್ಟ ಯುವ ಶಿಕ್ಷಕ !

ಖ್ಯಾತ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ದೂರದರ್ಶನ ಕ್ವಿಜ್ ಕಾರ್ಯಕ್ರಮದ ವೇದಿಕೆಯಲ್ಲಿ ಉತ್ತರ ಪ್ರದೇಶದ ಕಾನ್ಪುರದ ಯುವಕನೊಬ್ಬ ತನ್ನ ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಕೋಟ್ಯಂತರ ವೀಕ್ಷಕರ ಹೃದಯ ಗೆದ್ದಿದ್ದಾನೆ. ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಉದ್ಧೇಶ್ಯ ಸಚನ್ ಎಂಬ ಯುವಕ, 25 ಲಕ್ಷ ರೂಪಾಯಿ ಮೌಲ್ಯದ ಪ್ರಶ್ನೆಯನ್ನು ಎದುರಿಸುವ ಹಂತಕ್ಕೆ ತಲುಪುವ ಜೊತೆಗೆ, ತಾನು ಸದ್ದಿಲ್ಲದೆ ನಡೆಸುತ್ತಿರುವ ಮಹತ್ವದ ಸಮಾಜ ಸೇವೆಯ ಪಯಣವನ್ನು ಹಂಚಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಕಾನ್ಪುರದಲ್ಲಿ ನಿರ್ಗತಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗಾಗಿ ಉದ್ಧೇಶ್ಯ ಸಚನ್ ಒಂದು ಶಾಲೆಯನ್ನು ನಡೆಸುತ್ತಿದ್ದು, ಅಲ್ಲಿ ಸದ್ಯ 400 ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಯಾವುದೇ ವಾಣಿಜ್ಯ ಉದ್ದೇಶವಿಲ್ಲದೆ ಕೇವಲ ಶಿಕ್ಷಣ ವಂಚಿತರ ಭವಿಷ್ಯ ರೂಪಿಸುವುದೇ ಈ ಶಾಲೆಯ ಮೂಲ ಉದ್ದೇಶವಾಗಿದೆ.

ಸುಮಾರು ಎಂಟು ವರ್ಷಗಳ ಹಿಂದೆ ಕೇವಲ 250 ರೂಪಾಯಿ ಬಂಡವಾಳದೊಂದಿಗೆ ಆರಂಭವಾದ ಈ ಪಯಣದ ಹಿಂದಿರುವುದು ಕಣ್ಣೀರಿನ ಕಥೆ. ಉದ್ಧೇಶ್ಯ ಅವರು ಅಂದು ತಮ್ಮ ತಾಯಿಯ ಬಳಿ 250 ರೂಪಾಯಿ ಸಾಲ ಪಡೆದು, ಒಂದು ಮರದ ನೆರಳಿನಲ್ಲಿ ಕೆಲವೇ ಕೆಲವು ಮಕ್ಕಳಿಗೆ ಅಕ್ಷರ ಕಲಿಸಲು ಆರಂಭಿಸಿದ್ದರು. ಮಳೆ, ಗಾಳಿ, ಬಿಸಿಲ ನಡುವೆಯೂ ಅವರ ಶಿಕ್ಷಣ ಕಲಿಸುವ ಅದಮ್ಯ ಉತ್ಸಾಹ ಕುಂದಿರಲಿಲ್ಲ. ಇವರ ಪ್ರಾಮಾಣಿಕ ಪ್ರಯತ್ನಕ್ಕೆ ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕರ ಸಹಕಾರವೂ ದೊರೆತಿದ್ದು, ಮರದ ಕೆಳಗೆ ಆರಂಭವಾದ ಆ ಪುಟ್ಟ ತರಗತಿಗಳು ಇಂದು ಸುಸಜ್ಜಿತವಾದ ಸ್ವಂತ ಕಟ್ಟಡದ ರೂಪ ಪಡೆದುಕೊಂಡಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಟ್ಟಡ ತಲೆಎತ್ತಿದರೂ ತಮ್ಮ ಮೂಲ ಧ್ಯೇಯವನ್ನು ಬದಲಿಸದ ಈ ಯುವಕ, ಇಂದಿಗೂ ಆ ಬಡ ಮಕ್ಕಳಿಂದ ಒಂದೇ ಒಂದು ರೂಪಾಯಿ ಶುಲ್ಕ ಪಡೆಯದೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಈ ಶಾಲೆಯನ್ನು ಇನ್ನಷ್ಟು ವಿಸ್ತರಿಸಿ, ಸಮಾಜದ ತೀರ ಕೆಳಸ್ತರದ ಇನ್ನಷ್ಟು ಬಡ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲದೆ ಅಕ್ಷರ ಜ್ಞಾನ ಧಾರೆ ಎರೆಯುವುದು ತಮ್ಮ ಮುಂದಿನ ಗುರಿ ಎಂದು ಅವರು ವೇದಿಕೆಯಲ್ಲಿ ತಿಳಿಸಿದ್ದಾರೆ. ಯುವಕನ ಈ ಅದ್ಭುತ ಸಾಧನೆ ಮತ್ತು ಸಾಮಾಜಿಕ ಕಳಕಳಿಗೆ ಕಾರ್ಯಕ್ರಮದ ನಿರೂಪಕ ಅಮಿತಾಭ್ ಬಚ್ಚನ್ ಸೇರಿದಂತೆ ಇಡೀ ಪ್ರೇಕ್ಷಕ ಸಮೂಹ ಎದ್ದುನಿಂತು ಗೌರವ ಸಲ್ಲಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular