ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬ್ಯಾನರ್ ಅಳವಡಿಕೆ ಮಾಡುವ ವಿಚಾರಕ್ಕೆ ದೊಡ್ಡ ಗಲಾಟೆ ನಡೆದಿದೆ. ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ, ಗಂಗಾವತಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ನಿವಾಸದ ಮುಂದೆ ಗಲಾಟೆ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದಾನೆ.
ಬಳ್ಳಾರಿ ನಗರದ ಅವಂಬಾವಿ ಏರಿಯಾದಲ್ಲಿರುವ ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮನೆಗೆ ಬಾಂಬ್ ನಿಷ್ಕ್ರೀಯ ದಳ ಸೋಮವಾರ ಭೇಟಿ ನೀಡಿದೆ. ಗಲಾಟೆ ವೇಳೆ ಜನಾರ್ದನ ರೆಡ್ಡಿ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಕಿಟಕಿಗಳಿಗೆ ಹಾನಿಯಾಗಿದೆ ಎಂಬ ಆರೋಪವಿದೆ.
ಪೊಲೀಸರ ಪರಿಶೀಲನೆ ವೇಳೆ ಜನಾರ್ದನ ರೆಡ್ಡಿ ನಿವಾಸದಲ್ಲಿ 50ಕ್ಕೂ ಹೆಚ್ಚು ದೊಣ್ಣೆಗಳು ಪತ್ತೆಯಾಗಿವೆ. ಗಲಾಟೆ ನಡೆಯುವಾಗ ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಬೆಂಬಲಿಗರು ದೊಣ್ಣೆ ಹಿಡಿದು ನಿಂತಿದ್ದರು ಎಂಬ ಆರೋಪಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
ಗಲಭೆಗೆ ಕಾರಣ: ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಅಳವಡಿಕೆ ಮಾಡುವಾಗ ಗಲಾಟೆ ನಡೆದಿದೆ. ಮೊದಲು ಹಾಕಿದ್ದ ಬ್ಯಾನರ್ ಅನ್ನು ಜನಾರ್ದನ ರೆಡ್ಡಿ ಬೆಂಬಲಿಗರು ಹರಿದು ಹಾಕಿದ್ದರು.
ಬಳಿಕ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿಯೇ ಚೇರ್ ಹಾಕಿ ಕುಳಿತುಕೊಂಡು ಮತ್ತೆ ಬ್ಯಾನರ್ ಹಾಕಿಸಿದ್ದಾರೆ ಎಂಬುದು ಆರೋಪವಾಗಿದೆ.
ಹೀಗೆ ಬ್ಯಾನರ್ ಹಾಕುವಾಗ ಜನಾರ್ದನ ರೆಡ್ಡಿ ಬೆಂಬಲಿಗರು ಮನೆಯ ಮುಂದೆ ದೊಣ್ಣೆ ಹಿಡಿದು ನಿಂತಿದ್ದರು. ಈ ಕಾರಣಕ್ಕೆ ನಾರಾ ಭರತ್ ರೆಡ್ಡಿ ಬೆಂಬಲಿಗರು, ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ ಎಂಬುದು ಘಟನೆಗೆ ಕಾರಣವಾಗಿದೆ.
ಈ ಸಮಯದಲ್ಲಿ ಸತೀಶ್ ರೆಡ್ಡಿ ಖಾಸಗಿ ಗನ್‌ಮ್ಯಾನ್‌ಗಳು ಹಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ ಒಂದು ಗುಂಡು ತಾಗಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಈಗ ಈ ಪ್ರಕಣದ ರಾಜ್ಯ ರಾಜಕೀಯದಲ್ಲಿ ಜಪಾಪಟಿಗೆ ಕಾರಣವಾಗಿದೆ.
ಜನಾರ್ದನ ರೆಡ್ಡಿ ಮನೆಯಲ್ಲಿ ಪೊಲೀಸರು ಸೋಮವಾರ ಪರಿಶೀಲನೆ ಮಾಡುವಾಗ ದೊಣ್ಣೆಗಳು ಪತ್ತೆಯಾಗಿದ್ದು, ಬೆಂಬಲಿಗರು ದೊಣ್ಣೆ ಹಿಡಿದು ನಿಂತಿದ್ದರು ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ಈ ಕುರಿತು ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಬಳ್ಳಾರಿ ಗಲಭೆ ಸಂಬಂಧ 26 ಜನರನ್ನು ಬಂಧಿಸಲಾಗಿದೆ. ಬ್ಯಾನರ್‌ಗಳನ್ನು ಅಳವಡಿಸುವ ವಿಚಾರದಲ್ಲಿ ಉಂಟಾದ ವಿವಾದದಿಂದ ಆರಂಭವಾದ ಈ ಗಲಭೆ ಒಬ್ಬರ ಸಾವಿಗೆ ಕಾರಣವಾಗಿತ್ತು ಮತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಒಟ್ಟು 6 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ದುಷ್ಕರ್ಮಿಗಳನ್ನು ಗುರುತಿಸಲು ಪೊಲೀಸರು ವಿಡಿಯೋ ತುಣುಕುಗಳು ಮತ್ತು ಇತರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಜನಾರ್ದನ ರೆಡ್ಡಿ ನಿವಾಸದ ಮುಂದೆ ನಡೆದ ಗಲಭೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಘಟನೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಜನರ್ದನ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದರು.
ಬಿ.ವೈ.ವಿಜಯೇಂದ್ರ ಅವರು ಗಲಭೆಯಲ್ಲಿ ಗಾಯಗೊಂಡು ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನು ಭೇಟಿ ಮಾಡಿ, ಯೋಗ ಕ್ಷೇಮ ವಿಚಾರಿಸಿ, ಧೈರ್ಯ ತುಂಬಿ ಸಾಂತ್ವನ ಹೇಳಿದ್ದರು. ಶಾಸಕ ಜನಾರ್ದನ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯ ಮಾಹಿತಿ ಪಡೆದಿದ್ದರು.
ಭಾನುವಾರ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಇತರ ನಾಯಕರು ಜನಾರ್ದನ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದರು. ಆರ್.ಅಶೋಕ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಗೂಂಡಾಗಳಿಂದ ಬಿಜೆಪಿ ಶಾಸಕರಾದ ಜನಾರ್ದನ ರೆಡ್ಡಿ ಅವರ ಮೇಲೆ ಹಲ್ಲೆ ಮತ್ತು ಕೊಲೆ ಪ್ರಯತ್ನ ನಡೆದ ಹಿನ್ನೆಲೆಯಲ್ಲಿ ಇಂದು ಬಳ್ಳಾರಿಗೆ ಭೇಟಿ ನೀಡಿ ನಮ್ಮ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಧೈರ್ಯ ತುಂಬಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಯಿತು’ ಎಂದು ಹೇಳಿದ್ದರು.
‘ಕಾಂಗ್ರೆಸ್ ಶಾಸಕ ಭರತ್ ಅವರ ಗನ್‌ಮ್ಯಾನ್ ಗುಂಡು ಹಾರಿಸಿದ್ದಾರೆ ಎಂಬ ಸತ್ಯವನ್ನು ಬಯಲು ಮಾಡಿದರು ಎಂಬ ಕಾರಣಕ್ಕೆ ಎಸ್‌ಪಿಯನ್ನು ಅಮಾನತು ಮಾಡಲಾಗಿದೆ. ಗನ್ ಅನ್ನು ವಶಕ್ಕೆ ಪಡೆದು ಆರೋಪಿಗಳು ರಾಜ್ಯ ಬಿಟ್ಟು ಓಡಿಹೋಗಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸರ್ಕಾರವೇ ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಬಳ್ಳಾರಿ ಘಟನೆಯೇ ಸಾಕ್ಷಿ’ ಎಂದು ದೂರಿದ್ದರು.

