ನಿನ್ನೆ ( ಮೇ 4 ) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳ, ಪುದುಚೆರಿ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಗೆದ್ದು ಬೀಗಿದರೆ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಕಂಡಿತು. ಇನ್ನು ತಮಿಳುನಾಡಿನಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಇದ್ದರೂ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದು ಸರ್ಕಾರ ಸ್ಥಾಪಿಸಲು ಇನ್ನೂ 10 ಸ್ಥಾನಗಳನ್ನು ಪಡೆಯಬೇಕಾದ ಅನಿವಾರ್ಯತೆ ಇದೆ.
ಇನ್ನು ತಮಿಳುನಾಡಿನಲ್ಲಿ ಈ ಬಾರಿ ಟಿವಿಕೆ ಪಕ್ಷ ಯಾರೂ ಊಹಿಸಿರದ ಹಾಗೆ ಪ್ರಚಂಡ ಗೆಲುವನ್ನು ಕಂಡು ಇತಿಹಾಸ ಸೃಷ್ಟಿಸಿದೆ. ಎಂಜಿಆರ್ ಬಳಿಕ ಮೊದಲ ಚುನಾವಣೆಯಲ್ಲೇ ಗೆದ್ದು ಅಧಿಕಾರ ಸ್ಥಾಪಿಸುವ ಹೊಸ್ತಿಲಲ್ಲಿ ದಳಪತಿ ವಿಜಯ್ ನಿಂತಿದ್ದಾರೆ.
ಅಡಳಿತಾರೂಢ ಡಿಎಂಕೆಯನ್ನೇ ಮಣಿಸಿ ಗೆದ್ದ ಟಿವಿಕೆ ಯಶಸ್ಸಿನ ಹಿಂದೆ ವಿಜಯ್ ಸ್ಟಾರ್‌ಡಂ ಜತೆಗೆ ಸಾಲು ಸಾಲು ಉಚಿತ ಯೋಜನೆಗಳ ಆಫರ್ ಸಹ ಕೆಲಸ ಮಾಡಿದೆ.
ಹೀಗೆ ಕಮಾಲ್ ಮಾಡಿ ಗೆದ್ದಿರುವ ಟಿವಿಕೆಯಲ್ಲಿ ಅನುಭವಿ ರಾಜಕಾರಣಿಗಳಿಗಿಂತ ಹೆಚ್ಚೇನೂ ರಾಜಕೀಯ ತಿಳಿಯದ ಅಭ್ಯರ್ಥಿಗಳೇ ಇದ್ದಾರೆ. ಅವರು ನುರಿತ ರಾಜಕಾರಣಿಗಳನ್ನೇ ಸೋಲಿಸಿ ಗೆದ್ದು ಬೀಗಿದ್ದಾರೆ.
ಇನ್ನು ತಮಿಳುನಾಡು ಚುನಾವಣೆ ಕೇವಲ ಒಂದು ಮತದಿಂದ ಗೆದ್ದ ರೋಚಕ ಕ್ಷಣಕ್ಕೂ ಸಹ ಸಾಕ್ಷಿಯಾಗಿದೆ. 185ನೇ ವಿಧಾನಸಭಾ ಕ್ಷೇತ್ರವಾದ ತಿರುಪ್ಪಾತ್ತೂರ್‌ನಲ್ಲಿ ಟಿವಿಕೆ ಪಕ್ಷದ ಶ್ರೀನಿವಾಸ ಸೇತುಪತಿ ಆರ್ ಡಿಎಂಕೆ ಪಕ್ಷದ ಪೆರಿಯಕರುಪ್ಪನ್ ಕೆಆರ್ ವಿರುದ್ಧ ಕೇವಲ 1 ಮತದಿಂದ ರೋಚಕ ಗೆಲುವು ಕಂಡಿದ್ದಾರೆ.
ಡಿಎಂಕೆಯ ಪೆರಿಯಕರುಪ್ಪನ್ ಕೆಆರ್ 83374 ಮತಗಳನ್ನು ಪಡೆದರೆ, ಟಿವಿಕೆಯ ಶ್ರೀನಿವಾಸ ಸೇತುಪತಿ ಆರ್ 83375 ಮತಗಳನ್ನು ಪಡೆದುಕೊಂಡಿದ್ದಾರೆ.
ಈ ರೀತಿ ಕೇವಲ ಒಂದು ಮತದಿಂದ ಗೆದ್ದ ಉದಾಹರಣೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಸಹ ಇದೆ. 2004ರಲ್ಲಿ ಧ್ರುವನಾರಾಯಣ ಎಆರ್ ಕೃಷ್ಣಮೂರ್ತಿ ವಿರುದ್ಧ ಸಂತೇಮರಹಳ್ಳಿ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಿಂದ ಗೆದ್ದಿದ್ದರು.

