ಕೊಪ್ಪಳ: ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ಮಂಗಳವಾರ ತುಂಗಭದ್ರಾ ಆರತಿ ಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ನೆರವೇರಿತು.
ಪವಿತ್ರ ತೀರ್ಥ ಕ್ಷೇತ್ರ ಕಾಶಿಯಲ್ಲಿ (ವಾರಣಾಸಿ) ಜರುಗುವ ವಿಶ್ವಪ್ರಸಿದ್ಧ ಗಂಗಾ ಆರತಿಯ ಮಾದರಿಯಲ್ಲೇ ತುಂಗಭದ್ರಾ ನದಿಯ ತಟದಲ್ಲಿ ಈ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ವಾರಣಾಸಿಯಿಂದ ಆಗಮಿಸಿದ್ದ ರಣಧೀರ್ ಆಚಾರ್ ನೇತೃತ್ವದ 11 ನುರಿತ ಅರ್ಚಕರ ತಂಡವು ಶಾಸ್ತ್ರೋಕ್ತವಾಗಿ, ಮಂತ್ರಘೋಷಗಳೊಂದಿಗೆ ತುಂಗಭದ್ರಾ ನದಿಗೆ ಮಹಾಮಂಗಳಾರತಿ ನೆರವೇರಿಸಿತು. ದೀಪಗಳ ಝಗಮಗಿಸುವ ಬೆಳಕು ಮತ್ತು ವೇದಘೋಷಗಳು ಭಕ್ತರಿಗೆ ಕಾಶಿಯ ಗಂಗಾ ತೀರದಲ್ಲೇ ಇರುವಂತಹ ದಿವ್ಯ ಅನುಭವವನ್ನು ಕಟ್ಟಿಕೊಟ್ಟವು.
ಸಚಿವರು, ಸಂಸದರು, ಶಾಸಕರು, ಇತರೆ ಗಣ್ಯರಿಂದ ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆಯ: ತುಂಗಾರತಿಗೂ ಮುನ್ನ ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ, ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ, ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಹಾಗೂ ಇತರೆ ಜನಪ್ರತಿನಿಧಿಗಳು ಸೇರಿ ತುಂಗಭದ್ರಾ ನದಿಗೆ ಆರತಿ ಬೆಳಗಿ ಬಾಗಿನ ಸಮರ್ಪಣೆ ಮಾಡಿದರು.
ಬಳಿಕ ನದಿ ದಡದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ದೇವಸ್ಥಾನದ ಉತ್ಸವ ಮೂರ್ತಿಯ ವಿಶೇಷ ಪೂಜೆಯಲ್ಲಿ ಎಲ್ಲ ಗಣ್ಯರು ಪಾಲ್ಗೊಂಡು ಭಕ್ತಿ ನಮನ ಸಲ್ಲಿಸಿದರು.
ಇದಲ್ಲದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಭರತನಾಟ್ಯ ಹಾಗೂ ನದಿ ತಟದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಚಿವರು, ಶಾಸಕರು ಹಾಗೂ ಇತರೆ ಗಣ್ಯರು ತುಂಗಭದ್ರಾ ಆರತಿ ಮಹೋತ್ಸವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ವಚನಾನಂದ ಸ್ವಾಮಿಗಳು, ವಿನಯ್ ಗುರೂಜಿ ಹಾಗೂ ವಿವಿಧ ಮಠಾಧೀಶರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ., ಮಾಜಿ ಸಂಸದ ಕರಡಿ ಸಂಗಣ್ಣ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷ ಹಸನಸಾಬ ನಭಿಸಾಬ ದೋಟಿಹಾಳ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೆಗೀ, ಸಹಾಯಕ ಆಯುಕ್ತ ಮಹೇಬೂಬ್ ಜೀಲಾನ್, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್.ಪ್ರಕಾಶ್ ರಾವ್ ಸೇರಿದಂತೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಸೇರಿದಂತೆ ಇತರೆ ಜನಪ್ರತಿನಿಧಿಗಳು, ಹಲವು ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶ್ರೀ ಹುಲಿಗೆಮ್ಮ ದೇವಿಯ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಬಾಲಕಾರ್ಮಿಕರ ವಿರುದ್ಧ ಕಾರ್ಯಾಚರಣೆ: ಕೊಪ್ಪಳ ಜಿಲ್ಲೆಯಲ್ಲಿ 14 ಮಕ್ಕಳ ರಕ್ಷಣೆ
ಕೊಪ್ಪಳ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್.ಸಿ.ಪಿ.ಸಿ.ಆರ್) ವತಿಯಿಂದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ Pan-India Rescue and Rehabilitation Campaign 4.0 ಅಭಿಯಾನದಡಿ ಕೊಪ್ಪಳ ಜಿಲ್ಲೆಯಲ್ಲಿ ಬಾಲಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರ ಅಧ್ಯಕ್ಷತೆಯಲ್ಲಿ ಜೂನ್ 5ರಂದು ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ನಿರ್ದೇಶನದಂತೆ ಜೂನ್ನಿಂದ ಆಗಸ್ಟ್ 2026ರವರೆಗೆ ಜಿಲ್ಲೆಯ ವಿವಿಧ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಮಕ್ಕಳ ಸಹಾಯವಾಣಿ-1098 ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಪಾಸಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಕೊಪ್ಪಳ, ಯಲಬುರ್ಗಾ, ಕುಕನೂರು, ಕಾರಟಗಿ, ಗಂಗಾವತಿ ಹಾಗೂ ಮುನಿರಾಬಾದ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೋಟೆಲ್, ಪೇಡಾ ಅಂಗಡಿ, ಗ್ಯಾರೇಜ್, ಆಟೋಮೊಬೈಲ್ ಅಂಗಡಿ, ಮೆಟಲ್ ಸಾಮಾನು ಅಂಗಡಿ, ಚಿಕನ್ ಸೆಂಟರ್ ಹಾಗೂ ಕುರಿ ಕಾಯುವ ಕೆಲಸಗಳಲ್ಲಿ ತೊಡಗಿದ್ದ ಮಕ್ಕಳನ್ನು ಪತ್ತೆಹಚ್ಚಲಾಗಿದೆ. ಜೂನ್ 14ರಂದು ಕೊಪ್ಪಳದಲ್ಲಿ ಮೂವರು ಕಿಶೋರ ಕಾರ್ಮಿಕರನ್ನು, ಜೂನ್ 19ರಂದು ಯಲಬುರ್ಗಾದಲ್ಲಿ ಇಬ್ಬರು ಕಿಶೋರರು ಹಾಗೂ ಓರ್ವ ಬಾಲಕಾರ್ಮಿಕನನ್ನು ರಕ್ಷಿಸಲಾಯಿತು. ಜೂನ್ 30ರಂದು ಕುಕನೂರಿನಲ್ಲಿ ಓರ್ವ ಕಿಶೋರ ಕಾರ್ಮಿಕ ಹಾಗೂ ಜುಲೈ 2ರಂದು ಅಳವಂಡಿಯಲ್ಲಿ 13 ವರ್ಷದ ಬಾಲಕಾರ್ಮಿಕನನ್ನು ರಕ್ಷಿಸಲಾಗಿದೆ.
ಅದೇ ರೀತಿ ಜುಲೈ 28ರಂದು ಕಾರಟಗಿಯಲ್ಲಿ ಓರ್ವ ಕಿಶೋರ ಕಾರ್ಮಿಕ, ಆಗಸ್ಟ್ 5ರಂದು ಗಂಗಾವತಿ ತಾಲೂಕಿನ ತಿಮ್ಮಲಾಪುರದಲ್ಲಿ 13 ವರ್ಷದ ಬಾಲಕಾರ್ಮಿಕ, ಆಗಸ್ಟ್ 20ರಂದು ಕೊಪ್ಪಳದಲ್ಲಿ ಓರ್ವ ಕಿಶೋರ ಕಾರ್ಮಿಕ ಹಾಗೂ ಆಗಸ್ಟ್ 21ರಂದು ಮುನಿರಾಬಾದ್ನಲ್ಲಿ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಆಗಸ್ಟ್ 7ರಂದು ಕಾರಟಗಿಯಲ್ಲಿ ಮತ್ತು ಇತರೆ ಪ್ರದೇಶಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಯಾವುದೇ ಬಾಲಕಾರ್ಮಿಕರು ಪತ್ತೆಯಾಗಿಲ್ಲ.
ಒಟ್ಟು 14 ಮಕ್ಕಳ ರಕ್ಷಣೆ: ಜೂನ್ನಿಂದ ಆಗಸ್ಟ್ 2026ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 12 ಕಿಶೋರ ಕಾರ್ಮಿಕರು ಹಾಗೂ 2 ಬಾಲಕಾರ್ಮಿಕರು ಸೇರಿದಂತೆ 14 ಮಕ್ಕಳನ್ನು ರಕ್ಷಿಸಲಾಗಿದೆ. ರಕ್ಷಿಸಲಾದ ಎಲ್ಲ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಪುನರ್ವಸತಿ ಹಾಗೂ ಶಿಕ್ಷಣ ಸೇರಿದಂತೆ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಲಾಗಿದೆ.
ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡ ಮಾಲೀಕರ ವಿರುದ್ಧ ಆಯಾ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈವರೆಗೆ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಉಳಿದ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಕೊಪ್ಪಳ ನ್ಯಾಯಾಲಯದಲ್ಲಿ 3, ಯಲಬುರ್ಗಾ ನ್ಯಾಯಾಲಯದಲ್ಲಿ 2 ಹಾಗೂ ಕುಕನೂರು ನ್ಯಾಯಾಲಯದಲ್ಲಿ 1 ಸೇರಿದಂತೆ ಒಟ್ಟು 6 ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಾರ್ಮಿಕ ನಿರೀಕ್ಷಕಿ ಮಂಜುಳಾ ಅವರು ಕೊಪ್ಪಳ ನ್ಯಾಯಾಲಯದಲ್ಲಿ 1 ಪ್ರಕರಣ ಹಾಗೂ ಕಾರ್ಮಿಕ ನಿರೀಕ್ಷಕಿ ನಿವೇದಿತಾ ಅವರು ಕುಷ್ಟಗಿ ನ್ಯಾಯಾಲಯದಲ್ಲಿ 2 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರು, ಕಾರ್ಮಿಕ ನಿರೀಕ್ಷಕರು, ಮಕ್ಕಳ ಸಹಾಯವಾಣಿ-1098 ಸಿಬ್ಬಂದಿ, ಸ್ಪಂದನಾ ಸಂಸ್ಥೆಯ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಕ್ಕಳು ದುಡಿಮೆಯಲ್ಲಿ ತೊಡಗಿರುವುದು ಕಂಡುಬAದಲ್ಲಿ ಸಂಬAಧಿಸಿದ ಇಲಾಖೆಗೆ ಅಥವಾ ಮಕ್ಕಳ ಸಹಾಯವಾಣಿ-1098ಕ್ಕೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

