ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ 44 ನವಿಲುಗಳು ಮತ್ತು 30 ಕೋಳಿಗಳು ಸಾವನ್ನಪ್ಪಿದ್ದವು. ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವೆಂದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಮುಂಜಾಗೃತಾ ಕ್ರಮಗಳನ್ನು ಕೈಗೊಳಲಾಗಿದ್ದರೂ ಜಿಲ್ಲೆಯಲ್ಲಿ ಮತ್ತೆ ನವಿಲುಗ್ಗಳ ಸರಣಿ ಸಾವು ಮುಂದುವರೆದಿದೆ.
ತುಮಕೂರಿನಲ್ಲಿ 54ಕ್ಕೂ ಹೆಚ್ಚು ನವಿಲುಗಳು ಸಾವನ್ನಪ್ಪಿವೆ. ಇದರಿಂದಾಗಿ ಹಕ್ಕಿ ಜ್ವರದ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತುಮಕೂರು ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ 54ಕ್ಕೂ ಹೆಚ್ಚು ನವಿಲುಗಳು ಸಾವನ್ನಪ್ಪಿವೆ.
ತುಮಕೂರು ತಾಲೂಕು ಮಾತ್ರವಲ್ಲದೆ, ಇದೀಗ ಕುಣಿಗಲ್‌ನಲ್ಲಿಯೂ ನವಿಲಿನ ಕಳೆಬರ ಪತ್ತೆಯಾಗಿದ್ದು, ಹಕ್ಕಿ ಜ್ವರ ಜಿಲ್ಲೆಯ ಇತರೆ ಭಾಗಗಳಿಗೂ ಹರಡುತ್ತಿರುವ ಆತಂಕವಿದೆ. ಕುಣಿಗಲ್‌ನಲ್ಲಿ ಮತ್ತೆ ನವಿಲುಗಳು ಸಾವನ್ನಪ್ಪಿದರೆ ಕೂಡಲೇ ಸ್ಯಾಂಪಲ್‌ಗಳನ್ನು ವರದಿಗೆ ರವಾನಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ನವಿಲುಗಳ ನಿರಂತರ ಸಾವಿನ ಬೆನ್ನಲ್ಲೇ ಪಶುಸಂಗೋಪನಾ ಇಲಾಖೆ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಹಕ್ಕಿಗಳ ಚಲನವಲನದ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಕಾಡುಪ್ರಾಣಿಗಳು ಹಾಗೂ ಹಕ್ಕಿಗಳ ಸಾವಿನ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ವರದಿ ಮಾಡಲು ತಿಳಿಸಲಾಗಿದೆ.
ಇನ್ನು ತುಮಕೂರು ತಾಲೂಕಿನ ಬೊಮ್ಮನಹಳ್ಳಿಯ ಕೋಳಿ ಫಾರಂನಲ್ಲಿ 30ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದವು. ಹಕ್ಕಿ ಜ್ವರದ ಭೀತಿಯ ನಡುವೆ ಈ ಘಟನೆ ಗ್ರಾಮಸ್ಥರನ್ನು ಕಂಗಾಲಾಗಿಸಿತ್ತು. ತಕ್ಷಣವೇ ಮೃತ ಕೋಳಿಗಳ ಸ್ಯಾಂಪಲ್‌ಗಳನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿಲ್ಲಎಂದು ದೃಢಪಟ್ಟಿದೆ. ಇದರಿಂದ ಕೋಳಿ ಫಾರಂ ಮಾಲೀಕರು ಹಾಗೂ ಸ್ಥಳೀಯರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ ಆದರೆವ್ ಕೋಳಿಗಳ ಸಾವಿಗೆ ಕಾರಣವೇನು? ಎಂಬುದು ಪತ್ತೆಯಾಗಿಲ್ಲ.

