ಬೆಂಗಳೂರು: ಉಗ್ರ ಸಂಘಟನೆಯೊಂದಿಗೆ ಸೇರಿಕೊಂಡು ದಾಳಿಗೆ ಸಂಚುರೂಪಿಸಿದ್ದ ಶಂಕಿತ ಉಗ್ರನನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಅಸಾಫೂಲ್ ಮಲ್ಲಿಕ್ ಬಂಧಿತ ಶಂಕಿತ ಉಗ್ರನಾಗಿದ್ದಾನೆ. ಈತನನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜಿಗಣಿ ಸಮೀಪ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಟಿಟಿಪಿ ಸಂಘಟನೆಯ ಜೊತೆಗೆ ಗುರುತಿಸಿಕೊಂಡಿದ್ದ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಪಾಕಿಸ್ತಾನ ಸೇನೆ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಮತ್ತು ಭಾರತದಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಯ ಜೊತೆ ಸೇರಿಕೊಂಡು ಅಸಾಫೂಲ್ ಮಲ್ಲಿಕ್ ಕೆಲಸ ಮಾಡುತ್ತಿರುವ ಮಾಹಿತಿ ಬಂದಿದ್ದು, ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.
ಇಸ್ರೇಲ್ -ಪ್ಯಾಲೇಸ್ತೀನ್ ವಿವಾದದಲ್ಲಿ ಇಸ್ರೇಲ್ ದೇಶದವರಿಗೆ ಪಾಕಿಸ್ತಾನ ಸೇನೆ ಸಹಾಯ ಮಾಡುತ್ತಿದೆ. ಪ್ಯಾಲೇಸ್ತೀನ್ ಮುಸ್ಲಿಮರಿಗೆ ಸಹಾಯ ಮಾಡುತ್ತಿಲ್ಲ, ಪಾಕಿಸ್ತಾನ ಸೇನೆಯ ಮೇಲೆ ಕೋಪವಿದೆ. ಭಾರತದಲ್ಲಿ ಕೂಡ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಆರೋಪಿ ವಿಚಾರಣೆಯ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ಫೇಸ್ಬುಕ್ ಮೂಲಕ ಅಫ್ಘಾನಿಸ್ತಾನದ ಇಮ್ರಾನ್ ಹೈದರ್ ಎಂಬುವನನ್ನು ಪರಿಚಯಿಸಿಕೊಂಡು ಟಿಟಿಪಿ ಸೇರಿ ಆಫ್ಘಾನಿಸ್ತಾನಕ್ಕೆ ಹೋಗಲು ವೀಸಾ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದ ಈತ ಫೇಸ್ಬುಕ್ ಮತ್ತು ವಾಟ್ಸಾಪ್ ನಲ್ಲಿ ಆಫ್ಘಾನಿಸ್ತಾನ ಮೂಲದ ಇಮ್ರಾನ್ ಹೈದರ್ ಜೊತೆಗೆ ಚಾಟಿಂಗ್ ಮಾಡಿರುವುದು ಗೊತ್ತಾಗಿದೆ.

