ನವದೆಹಲಿ: ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದ್ದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುಂಕ ಸಮರದ ನೀತಿಯಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಬಲವಂತದ ಕಾರ್ಮಿಕ ಪದ್ಧತಿಯ ಮೂಲಕ ಸರಕುಗಳನ್ನು ತಯಾರಿಸುವ ಮತ್ತು ಅದನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಲು ವಿಫಲವಾಗಿವೆ ಎಂದು ಆರೋಪಿಸಿ, ಭಾರತ, ಚೀನಾ, ಜಪಾನ್ ಹಾಗೂ ಬ್ರಿಟನ್ ಸೇರಿದಂತೆ 60 ದೇಶಗಳ ಆಮದು ಸರಕುಗಳ ಮೇಲೆ ಅಮೆರಿಕ ಸರ್ಕಾರ ಶೇ.10 ರಿಂದ ಶೇ.12.5ರಷ್ಟು ಹೊಸ ಸುಂಕ ವಿಧಿಸಿ ಆದೇಶ ಹೊರಡಿಸಿದೆ.ಟ್ರಂಪ್ ಆಡಳಿತದ ಈ ನೂತನ ಸುಂಕ ನೀತಿಯು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ತಲಾಶ್ ಸೃಷ್ಟಿಸಿದೆ.
1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ಆರಂಭದಲ್ಲಿ ಅಮೆರಿಕವು ಭಾರತದ ಮೇಲೆಯೂ ಶೇ.12.5ರಷ್ಟು ದಂಡದ ಸುಂಕ ವಿಧಿಸಲು ಉದ್ದೇಶಿಸಿತ್ತು. ಆದರೆ, ಭಾರತವು ಬಲವಂತದ ಕಾರ್ಮಿಕ ಪದ್ಧತಿ ವಿರುದ್ಧ ಸೂಕ್ತ ಸಾಂವಿಧಾನಿಕ ಹಾಗೂ ತಾಂತ್ರಿಕ ತಡೆಗಳನ್ನು ಹೊಂದಿದೆ ಎಂದು ಭಾರತೀಯ ಆಡಳಿತ ಮಂಡಳಿ ಮತ್ತು ರಾಜತಾಂತ್ರಿಕ ಅಧಿಕಾರಿಗಳು ಅಮೆರಿಕದ ಮುಂದೆ ಯಶಸ್ವಿಯಾಗಿ ವಾದಿಸಿದ್ದರು.
ದ್ವಿಪಕ್ಷೀಯ ಮಾತುಕತೆಗಳಲ್ಲಿ ನವದೆಹಲಿಯ ಸಕಾರಾತ್ಮಕ ಸ್ಪಂದನೆಗೆ ಮಣಿದ ಅಮೆರಿಕ, ಭಾರತದ ಮೇಲಿನ ಪ್ರಸ್ತಾವಿತ ಸುಂಕವನ್ನು ಶೇ.12.5ರಿಂದ ಶೇ.10ಕ್ಕೆ ಇಳಿಸಿದೆ. ಇದರಿಂದಾಗಿ ಭಾರತಕ್ಕೆ ನಿಗದಿಯಾಗಿದ್ದ ಹೆಚ್ಚಿನ ತೆರಿಗೆ ಹೊರೆಯಿಂದ ಕೊಂಚ ಸಮಾಧಾನ ಸಿಕ್ಕಂತಾಗಿದೆ.
ಯಾರಿಗೆ ಎಷ್ಟು ತೆರಿಗೆ? ಆಮದು ನಿಯಮಗಳಿವು:
ಶೇ.12.5 ತೆರಿಗೆ (ಕಠಿಣ ಕಾನೂನು ಇಲ್ಲದ ದೇಶಗಳು): ಬಲವಂತದ ಶ್ರಮದ ಮೂಲಕ ತಯಾರಿಸಿದ ಸರಕುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಇಲ್ಲದ ಚೀನಾ, ಜಪಾನ್ ನಂತಹ ದೇಶಗಳ ಮೇಲೆ ಗರಿಷ್ಠ ಶೇ.12.5ರಷ್ಟು ಸುಂಕ ಹೇರಲಾಗಿದೆ.
ಶೇ.10 ತೆರಿಗೆ (ಕಾನೂನು ಹೊಂದಿರುವ ದೇಶಗಳು): ಕಠಿಣ ನಿಯಮಗಳನ್ನು ಜಾರಿಗೆ ತಂದಿರುವ ಹಾಗೂ ಒಪ್ಪಿಕೊಂಡಿರುವ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಯುರೋಪಿಯನ್ ಯೂನಿಯನ್ (EU) ದೇಶಗಳಿಗೆ ಶೇ.10ರಷ್ಟು ಸುಂಕ ವಿಧಿಸಲಾಗಿದೆ.
ವಿಶೇಷ ವಿನಾಯಿತಿ: ಯುಎಸ್-ಮೆಕ್ಸಿಕೋ-ಕೆನಡಾ ಒಪ್ಪಂದದ ವ್ಯಾಪ್ತಿಗೆ ಬರುವ ಉತ್ಪನ್ನಗಳು ಹಾಗೂ ತೈಲ ಮತ್ತು ನೈಸರ್ಗಿಕ ಅನಿಲ ಆಮದುಗಳಿಗೆ ಈ ಹೊಸ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಮಾನವ ಹಕ್ಕುಗಳ ರಕ್ಷಣೆಗೆ ಕಠಿಣ ಕ್ರಮ: ಯುಎಸ್‌ಟಿಆರ್
ಇಂದಿನ ಈ ಕ್ರಮವು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾರುಕಟ್ಟೆಯ ಮೇಲಾಗುವ ಅನಗತ್ಯ ವ್ಯಾಪಾರ ಪ್ರಭಾವಗಳನ್ನು ಸರಿಪಡಿಸಲಿದೆ. ಬಲವಂತದ ಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು ತಕ್ಷಣವೇ ಕ್ರಮ ಕೈಗೊಂಡಿರುವ ನಮ್ಮ ವ್ಯಾಪಾರ ಪಾಲುದಾರರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ” ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಜೇಮಿಸನ್ ಗ್ರೀರ್ ತಿಳಿಸಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಆರಂಭವಾದ ಸೆಕ್ಷನ್ 301 ತನಿಖೆಯು ಅನ್ಯಾಯದ ವ್ಯಾಪಾರ ಪದ್ಧತಿ ಅನುಸರಿಸುವ ದೇಶಗಳ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳಲು ಅಮೆರಿಕಕ್ಕೆ ಅಧಿಕಾರ ನೀಡುತ್ತದೆ. ಪ್ರಸ್ತುತ ಭಾರತಕ್ಕೆ ಶೇ.10ರ ಸುಂಕ ನಿಗದಿಯಾಗಿದ್ದರೂ, ಭಾರತದ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಕುರಿತಾಗಿ ಮತ್ತೊಂದು ಸೆಕ್ಷನ್ 301 ತನಿಖೆ ಪ್ರಗತಿಯಲ್ಲಿದೆ.
ಶ್ರೀಲಂಕಾ ಮತ್ತು ಪಾಕಿಸ್ತಾನದಂತಹ ನೆರೆ ದೇಶಗಳು ಕೇವಲ ಒಂದೇ ತನಿಖೆ ಎದುರಿಸುತ್ತಿದ್ದರೆ, ಭಾರತವು ಎರಡು ಪ್ರತ್ಯೇಕ ತನಿಖೆ ಎದುರಿಸುತ್ತಿರುವುದರಿಂದ ಅಮೆರಿಕನ್ ಮಾರುಕಟ್ಟೆಯಲ್ಲಿ ಭಾರತದ ಸರಕುಗಳ ರಫ್ತು ಸ್ಪರ್ಧಾತ್ಮಕತೆಗೆ ದೀರ್ಘಕಾಲೀನ ಹಿನ್ನಡೆಯಾಗುವ ಭೀತಿ ಮುಂದುವರಿದಿದೆ

