ಮುಂಬೈ ಮಹಾನಗರಿಯಲ್ಲಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ತಮ್ಮ ಮೊಬೈಲ್ ಅನ್ನು ಆಟೋ ಚಾಲಕ ಮತ್ತು ಸ್ವಿಗ್ಗಿ ಡೆಲಿವರಿ ಬಾಯ್ ಸಹಾಯದಿಂದ ಮರಳಿ ಪಡೆದಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಘಟನೆಯ ಪ್ರತಿ ಹಂತಗಳನ್ನು ಹಂಚಿಕೊಂಡಿರುವ ಅವರು ಆಟೋ ಚಾಲಕ ಮತ್ತು ಸ್ವಿಗ್ಗಿ ಡೆಲಿವರಿ ಬಾಯ್ ನ ಪ್ರಾಮಾಣಿಕತೆ ಮತ್ತು ಸಹಾಯವನ್ನ ಸ್ಮರಿಸಿದ್ದಾರೆ. ನೆಟ್ಟಿಗರು ಕೂಡ ಮುಂಬೈ ನಗರದಲ್ಲಿ ಮೊಬೈಲ್ ಪತ್ತೆಗೆ ಸಹಾಯ ಮಾಡಿದ ಅವರನ್ನ ಕೊಂಡಾಡಿದ್ದಾರೆ.
ಮಹಿಳೆಯೊಬ್ಬರು ಮುಂಬೈನ ವರ್ಸೋವಾ ಮೆಟ್ರೋ ನಿಲ್ದಾಣದಲ್ಲಿದ್ದಾಗ ಅವರು ತಮ್ಮ ಐಫೋನ್ ಕಳೆದುಕೊಂಡಿರುವುದನ್ನ ಗಮನಿಸಿದ್ದಾರೆ. ತಕ್ಷಣ ಅವರು ತಮ್ಮನ್ನು ಮೆಟ್ರೋ ನಿಲ್ದಾಣಕ್ಕೆ ಬಿಟ್ಟುಹೋದ ಆಟೋ ಹುಡುಕಲು ಮುಂದಾದರು. ಆಟೋದಲ್ಲಿ ಮೊಬೈಲ್ ಕಳೆದುಕೊಂಡಿರುವ ಶಂಕೆಯಿಂದ ಅದನ್ನು ಪತ್ತೆಮಾಡಲು ರಿಕ್ಷಾ ಸ್ಟ್ಯಾಂಡ್‌ಗೆ ಅವಸರದಿಂದ ಹಿಂತಿರುಗಿದರು. ಅದೃಷ್ಟವಶಾತ್ ಆಟೋ ಚಾಲಕ ಮಹಿಳೆಯನ್ನು ಗುರ್ತಿಸಿದರು. ಕಳೆದುಹೋದ ಐ ಫೋನ್ ಗಾಗಿ ಆಟೋದಲ್ಲಿ ಹುಡುಕಾಟ ನಡೆಸಿದರೂ ಅದು ಪತ್ತೆಯಾಗಲಿಲ್ಲ. ಬಳಿಕ ಮಹಿಳೆಯ ನಂಬರ್ ಗೆ ಆಟೋ ಚಾಲಕರು ಕರೆ ಮಾಡಿದ್ರೂ ಫೋನ್ ರಿಂಗ್ ಆಗಲಿಲ್ಲ.
ಮತ್ತೆ ಮತ್ತೆ ಫೋನ್ ಗೆ ಕರೆ ಮಾಡಿದಾಗ
ಫೋನ್ ರಿಂಗಣಿಸಿತು, ಆದರೆ ಯಾರೂ ಉತ್ತರಿಸಲಿಲ್ಲ. ಇಷ್ಟೊತ್ತಿಗಾಗಲೇ ಫೋನ್ ಮರಳಿ ಪಡೆಯುವ ಭರವಸೆಯನ್ನು ಕಳೆದುಕೊಂಡಿದ್ದ ಮಹಿಳೆ ಮನೆಗೆ ಹೋಗಿ ಎಫ್‌ಐಆರ್ ದಾಖಲಿಸುವ ಯೋಚನೆಯಲ್ಲಿದ್ದರು. ಈ ವೇಳೆ ತಮ್ಮ ಸಂಪರ್ಕಕ್ಕಾಗಿ ಆಟೋ ಚಾಲಕ ಮಹಿಳೆಯ ಮತ್ತೊಂದು ಫೋನ್ ನಂಬರ್ ಕೇಳಿದಾಗ ಆಕೆ ನನ್ನ ಬಳಿ ಮತ್ತೊಂದು ನಂಬರ್ ಇಲ್ಲ ಎಂದಿದ್ದರು.
ನಂತರ ಆಟೋ ಡ್ರೈವರ್ ತಮ್ಮ ನಂಬರ್ ನೀಡಿ ಮೊಬೈಲ್ ಸಿಕ್ಕರೆ ತಿಳಿಸುತ್ತೇನೆ ಕರೆ ಮಾಡಿ ಎಂದು ಹೇಳಿದ್ದರು. ಇತ್ತ ಆಟೋ ಚಾಲಕರು ಸತತವಾಗಿ ಮಹಿಳೆಯ ಮೊಬೈಲ್ ಗೆ ಕರೆ ಮಾಡುತ್ತಲೇ ಇದ್ದರು. ಒಂದು ಕ್ಷಣ ಮೊಬೈಲ್ ರಿಂಗಣಿಸಿತು. ಫೋನ್ ರಿಸೀವ್ ಮಾಡಿದ ವ್ಯಕ್ತಿ ತನ್ನನ್ನು ಸ್ವಿಗ್ಗಿ ಡೆಲಿವರಿ ಬಾಯ್ ರಾಹುಲ್ ಕುಮಾರ್ ಎಂದು ಪರಿಚಯಿಸಿಕೊಂಡು ಫೋನ್ ಸಿಕ್ಕಿರುವುದಾಗಿ ಹೇಳಿದರು.
ಅವರನ್ನು ಆಜಾದ್ ನಗರ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗಲು ತಿಳಿಸಿದರು. ಫೋನ್ ಪಡೆಯಲು ಆಟೋ ಚಾಲಕ ಮಹಿಳೆಯನ್ನು ಕರೆದುಕೊಂಡು ಆಜಾದ್ ನಗರ ಮೆಟ್ರೋ ನಿಲ್ದಾಣಕ್ಕೆ ತೆರಳಿದರು. ವರ್ಸೋವಾ ಮೆಟ್ರೋ ನಿಲ್ದಾಣದ ಬಳಿ ಮೊಬೈಲ್ ಸಿಕ್ಕಿತೆಂದು ತಿಳಿಸಿದ ರಾಹುಲ್ ಕುಮಾರ್ ಅದನ್ನು ಮಹಿಳೆಗೆ ಹಿಂದಿರುಗಿಸಿದರು. ಈ ರೀತಿ ತಮ್ಮ ಮೊಬೈಲ್ ಪತ್ತೆಗೆ ಸಹಕರಿಸಿದ ಆಟೋಚಾಲಕರು ಮತ್ತು ಸ್ವಿಗ್ಗಿ ಡೆಲಿವರಿ ಬಾಯ್ ಸಹಾಯವನ್ನ ಮಹಿಳೆ ಕೊಂಡಾಡಿದ್ದಾರೆ.
https://twitter.com/historywali/status/1675497098899501061?ref_src=twsrc%5Etfw%7Ctwcamp%5Etweetembed%7Ctwterm%5E1675497098899501061%7Ctwgr%5Ecd058b849ca9016d0462dbe4dc0437078eef307a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Ftruehumansofbombayrickshawdriversandswiggydeliveryguyhelpwomanfindherlostiphonespotlight-newsid-n515308794