ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಿದ್ದು, ಡಿಸ್ಚಾರ್ಜ್ ವೇಳೆ ಬಿಲ್ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದರೂ ಅವರ ಚಿಕಿತ್ಸೆಗೆ ತಗಲುವ ವೆಚ್ಚ ಎಷ್ಟು? ಅದಕ್ಕಾಗಿ ಸರ್ಕಾರ ಎಷ್ಟು ಶ್ರಮವಹಿಸಿದೆ? ಸರ್ಕಾರ ಒಬ್ಬ ರೋಗಿಗೆ ಎಷ್ಟು ಮೊತ್ತವನ್ನು ಖರ್ಚು ಮಾಡುತ್ತದೆ ಎಂಬುದು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಎಲ್ಲಾ ರೋಗಿಗಳಿಗೂ ಗೊತ್ತಿರಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ರೋಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಹೊರಗೆ ಹೋಗುವಾಗ ಅವರ ಚಿಕಿತ್ಸೆಗೆ ಒಟ್ಟು ಎಷ್ಟು ವೆಚ್ಚ ತಗುಲಿದೆ ಎನ್ನುವ ಸಮಗ್ರ ಬಿಲ್ ನೀಡಲಾಗುವುದು. ಆದರೆ ಬಿಲ್ ಮೊತ್ತದ ಹಣವನ್ನು ಅವರಿಂದ ಪಡೆಯುವುದಿಲ್ಲ. ಅದು ಮೊತ್ತ ಪಾವತಿ ರಹಿತ ಬಿಲ್ ಆಗಿರುತ್ತದೆ. ಈ ಮಾದರಿಯನ್ನು ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯಿಂದಲೇ ಪ್ರಾರಂಭಿಸಲಾಗುವುದು. ನಂತರ ರಾಜ್ಯದ ಎಲ್ಲಾ ಕಡೆಗೂ ಈ ವ್ಯವಸ್ಥೆ ವಿಸ್ತರಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳ ವೈದ್ಯರ ವರ್ಗಾವಣೆಗೆ ಕೌನ್ಸೆಲಿಂಗ್ ನಿಯಮಕ್ಕೆ ತಿದ್ದುಪಡಿ ತರಲಾಗುವುದು. ಈ ಬಗ್ಗೆ ಪರಾಮರ್ಶೆ ನಡೆಸಲು ಇಲಾಖೆಯ ಕಾರ್ಯದರ್ಶಿಗೆ ಸೂಚಿಸಲಾಗಿದ್ದು, ಮುಂದಿನ ವರ್ಗಾವಣೆ ವೇಳೆ ಜಾರಿಗೆ ಬರದಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

