ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿಶೇಷ ಪ್ರಕರಣಗಳಿಗೆ (ವಿಶೇಷಚೇತನರು, ಗಂಭೀರ ಅನಾರೋಗ್ಯ ಹಾಗೂ ಪತಿ-ಪತ್ನಿ ಪ್ರಕರಣಗಳು) ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ನಡೆಸಿದ ಕೌನ್ಸೆಲಿಂಗ್ ವರ್ಗಾವಣೆ ಯಶಸ್ವಿಗೊಂಡಿದ್ದು, 561 ಮಂದಿಗೆ ಸ್ಥಳದಲ್ಲೇ ವರ್ಗಾವಣೆ ಆದೇಶ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಾನದಂಡಗಳಂತೆ ವಿಶೇಷ ಚೇತನರ ಸೌಲಭ್ಯಕ್ಕೆ ಅರ್ಹರಾದ 61 ಮಂದಿ ಕೌನ್ಸೆಲಿಂಗ್ ವರ್ಗಾವಣೆ ಲಾಭ ಪಡೆದಿದ್ದು, ಗಂಭೀರ ಕಾಯಿಲೆ ಎದುರಿಸುತ್ತಿರುವ 29 ಮಂದಿ ವರ್ಗಾವಣೆಗೊಂಡಿದ್ದಾರೆ. ಹಾಗೆಯೇ 56 ಒಂಟಿ ಮಹಿಳೆಯರು ಸ್ಥಾನ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದರೊಂದಿಗೆ ಪತಿ-ಪತ್ನಿ ಪ್ರಕರಣಗಳಲ್ಲಿ 213 ಮಂದಿಗೆ ವರ್ಗಾವಣೆ ಸೌಲಭ್ಯ ನೀಡಲಾಗಿದೆ ಹಾಗೂ ನ್ಯಾಯಾಲಯದ ನಿರ್ದೇಶನದಂತೆ ಮೂರು ಮಂದಿ ವರ್ಗಾವಣೆಗೆ ಅರ್ಹರಾಗಿದ್ದಾರೆ. ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದ 199 ಮಂದಿ ಪಿಡಿಒಗಳನ್ನು ಅವರ ಆಯ್ಕೆಗೆ ಅನುಗುಣವಾಗಿ ಕಡ್ಡಾಯ ವರ್ಗಾವಣೆಗೆ ಒಳಪಡಿಸಲಾಗಿದೆ. ಇಂದಿನಿಂದ 10 ದಿನಗಳ ಕಾಲ ಸಾಮಾನ್ಯ ಕೌನ್ಸೆಲಿಂಗ್ ವರ್ಗಾವಣೆಗಳು ಆರಂಭಗೊಳ್ಳಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.